ಪಾಶ್ಚಾತ್ಯ ದುಷ್ಟಕೂಟಗಳು ಭಯೋತ್ಪಾದನೆಯನ್ನು ಹರಡಿವೆ: ಬಶರುಲ್ ಅಸದ್

ಡಮಸ್ಕಸ್ ಜುಲೈ 12: ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುತ್ತಿರುವ ಪಾಶ್ಚಾತ್ಯ ಆಡಳಿತದ ದುಷ್ಟಕೂಟಗಳು ಯುರೋಪಿನಲ್ಲಿ ಭಯೋತ್ಪಾದನೆಯನ್ನು ಹರಡುತ್ತಿವೆ ಎಂದು ಸಿರಿಯದ ಅಧ್ಯಕ್ಷ ಬಶರುಲ್ ಅಸದ್ ತನ್ನನ್ನು ಭೇಟಿಯಾದ ಯುರೋಪಿಯನ್ ಪಾರ್ಲಿಮೆಂಟ್ ಪ್ರತಿನಿಧಿಗಳ ತಂಡಕ್ಕೆ ತಿಳಿಸಿದ್ದಾರೆ.ಕಳೆದ ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿ ಸಿರಿಯ ಅಧ್ಯಕ್ಷ ಅಸದ್‌ರೊಂದಿಗೆ ಇಂತಹ ಒಂದು ಸಂದರ್ಶನ ನಡೆದಿದೆ ಎಂದು ವರದಿಗಳು ತಿಳಿಸಿವೆ.ಯುರೋಪಿಯನ್ ಪಾರ್ಲಿಮೆಂಟ್‌ನ ವಿದೇಶ ವ್ಯವಹಾರಗಳ ಉಪಾಧ್ಯಕ್ಷರಾದ ಝೇವಿಯರ್ ಕೋಸೊ ನೇತೃತ್ವದ ಪ್ರತಿನಿಧಿ ತಂಡವನ್ನು ಸ್ವಾಗತಿಸಿ ಅವರು ಮಾತಾಡುತ್ತಿದ್ದರು.
ಯುರೋಪ್ ಎದರಿಸುತ್ತಿರುವ ಭಯೋತ್ಪಾದನೆ ಮತ್ತು ವಲಸೆಗಾರರ ಸಮಸ್ಯೆಗೆ ಕೆಲವು ಪಾಶ್ಚಾತ್ಯ ದುಷ್ಟಕೂಟಗಳ ನಾಯಕರು ಕಾರಣವಾಗಿದ್ದಾರೆ. ವಿಶೇಷವಾಗಿ ಸಿರಿಯದ ಭಯೋತ್ಪಾದಕ ಸಂಘಟನೆಗಳಿಗೆ ನೀಡುತ್ತಿರುವ ಬೆಂಬಲದಲ್ಲಿ ಇದು ಸ್ಪಷ್ಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಯುರೋಪಿಯನ್ ಯೂನಿಯನ್‌ನ ಕೆಲವು ಸದಸ್ಯ ರಾಷ್ಟ್ರಗಳ ನೀತಿ ನಿಲುವುಗಳನ್ನು ಸರಿಮಾಡುವಲ್ಲಿ ಯುರೋಪಿಯನ್ ಪಾರ್ಲಿಮೆಂಟ್ ಪ್ರಧಾನ ಪಾತ್ರ ನಿರ್ವಹಿಸಬೇಕಾಗಿದೆಯೆಂದು ಅಸದ್ ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿರಿಯದ ಪರಮಾಧಿಕಾರವನ್ನು ಕಾಪಾಡುವುದು ಅನಿವಾರ್ಯ ಮತ್ತು ಸಿರಿಯದ ಭವಿಷ್ಯವನ್ನು ಅಲ್ಲಿನ ಜನರೇ ತೀರ್ಮಾನಿಸಬೇಕಿದೆ ಎಂದು ಸಂದರ್ಶನದ ವೇಳೆ ಯುರೋಪಿಯನ್ ಯೂನಿಯನ್ ಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ವರದಿಯಾಗಿದೆ.







