ಡೆಂಗ್ಯೂ ಜ್ವರದಿಂದ ದಂಗಾದ ಸವಣೂರಿನ ಜನತೆ

ಸವಣೂರು, ಜು.12: ಕಳೆದ ಒಂದೂವರೆ ತಿಂಗಳುಗಳಿಂದ ಸವಣೂರು, ಮಾಂತೂರು, ಸೋಂಪಾಡಿ, ಪನೆಮಜಲು ಮತ್ತು ಪುಣ್ಚಪ್ಪಾಡಿ ಗ್ರಾಮದ ಜನರು ಡೆಂಗ್ಯೂ ಜ್ವರದಿಂದ ನರಳುತ್ತಿರುವಾಗ ಆರೋಗ್ಯ ಇಲಾಖೆಯವರು ಮುಂಜಾಗ್ರತಾ ಕ್ರಮಗಳನ್ನು ನಿಭಾಯಿಸದೆ ಜಾಣ ಕುರುಡರಾಗಿದ್ದಾರೆ
ಡೆಂಗ್ಯೂ ಜ್ವರವು ಪ್ರಮುಖವಾಗಿ ಸೊಳ್ಳೆಗಳಿಂದ ಹರಡುವುದರಿಂದ ಸೊಳ್ಳೆಗಳನ್ನು ನಾಶಪಡಿಸಬೇಕು ಮತ್ತು ಸೊಳ್ಳೆಗಳು ಉತ್ಪತ್ತಿಯಾಗದಂತೆ ತಡೆಯಬೇಕು ಇದಕ್ಕೆ ಮನೆಯೊಳಗೆ ರಾತ್ರಿ ಹೊತ್ತಿಗೆ ಸೊಳ್ಳೆ ಬತ್ತಿ ಹಚ್ಚುವುದರಿಂದ ಮಾತ್ರ ಪ್ರಯೋಜನವಾಗದು.
ಡೆಂಗ್ಯೂ ಜ್ವರಕ್ಕೆ ರೋಗ ನಿರೋಧಕ ಚುಚ್ಚು ಮದ್ದು ಸದ್ಯ ಲಭ್ಯವಿಲ್ಲ ಆದ್ದರಿಂದ ಸೊಳ್ಳೆಗಳ ನಿಯಂತ್ರಣವೇ ಪರಿಣಾಮಕಾರಿ ಮುಂಜಾಗ್ರತೆ.
ಇದು ಸಾಂಕ್ರಾಮಿಕ ರೋಗವಾಗಿ ಹರಡುವುದರಿಂದ ಆರೋಗ್ಯ ಇಲಾಖೆ ಮತ್ತು ಪಂಚಾಯತ್ ಇಲಾಖೆಯವರು ರೋಗ ಬಾದಿತ ಮತ್ತು ಅಬಾದಿತ ಮನೆಗಳ ಸುತ್ತ ಮುತ್ತಲಿನಲ್ಲಿ ಸೊಳ್ಳೆಗಳನ್ನು ತಡೆಯುವ ಕ್ರಿಮಿನಾಶಕಗಳನ್ನು ಸಿಂಪಡಿಸಬೇಕು ಮತ್ತು ಸೊಳ್ಳೆಗಳನ್ನು ನಿಯಂತ್ರಿಸುವ ಬಗ್ಗೆ ಜನರಿಗೆ ಮಾಹಿತಿಗಳನ್ನು ಕೊಡುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕು. ಗ್ರಾಮ ಮತ್ತು ಹಳ್ಳಿ ಪ್ರದೇಶಗಳಲ್ಲಿ ಮನೆಗಳು ಹೆಚ್ಚಾಗಿ ಒಳ ಪ್ರದೇಶಗಳಲ್ಲಿ ಇರುವುದರಿಂದ ಡಾಮಾರು ರಸ್ತೆಯ ಬದಿಗಳಲ್ಲಿ ಮಾತ್ರ ಕ್ರಮಿನಾಶಕಗಳನ್ನು ಸಿಂಪಡಿಸುವುದರಿಂದ ಸಮಗ್ರ ಪ್ರಯೋಜನವಾಗದು.
ಈ ಜ್ವರವು ಕಳೆದ ಒಂದೂವರೆ ತಿಂಗಳುಗಳಲ್ಲಿ ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ, ಇನ್ನು ಮುಂದೆ ಇನ್ನಷ್ಟು ಜೀವಗಳನ್ನು ಬಲಿ ತೆಗೆಯುವ ಮೊದಲು ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿ ಈ ಸಾಂಕ್ರಾಮಿಕ ಡೆಂಗ್ಯೂ ಜ್ವರವನ್ನು ಹತೋಟಿಗೆ ತರಲು ದೃಢ ನಿರ್ಧಾರ ಕೈಗೊಳ್ಳಬೇಕು.
ಸೊಳ್ಳೆಗಳ ಬಗ್ಗೆ ತಾತ್ಸಾರ ಮನೋಭಾವನೆ ಸಲ್ಲದು ಪ್ರತಿಯೊಬ್ಬರು ಅದನ್ನು ನಿಯಂತ್ರಿಸುವ ಬಗ್ಗೆ ಹೊಸ ಹೊಸ ವಿಧಾನಗಳನ್ನು ಅನುಸರಿಸಬೇಕಿದೆ.







