ರಾಷ್ಟ್ರೀಯ ಹೆದ್ದಾರಿ 75ರ ಬದಿಯಲ್ಲಿದ್ದ ಅಪಾಯಕಾರಿ ಮರಗಳ ತೆರವು
'varthabharati.in' ವರದಿ ಫಲಶುತಿ

ಬಂಟ್ವಾಳ, ಜು.12: ರಾಷ್ಟ್ರೀಯ ಹೆದ್ದಾರಿ 75ರ ಬದಿಯಲ್ಲಿ ಅವಘಡಗಳನ್ನು ಎದುರು ನೋಡುತ್ತಿದ್ದ ಅಪಾಯಕಾರಿ ಮರಗಳ ಬಗ್ಗೆ 'varthabharati.in' ವೆಬ್ ಸೈಟ್ ಮಾಡಿರುವ ವರದಿ ಫಲಶ್ರುತಿಯಾಗಿದ್ದು ಹೆದ್ದಾರಿ ಬದಿಯಿದ್ದ ಅಪಾಯಕಾರಿ ತಾಳೆ ಮರಗಳನ್ನು ತೆರವುಗೊಳಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 75ರ ಬುಡೋಳಿ ಜಂಕ್ಷನ್ ನಿಂದ ಮಾಣಿ ಪಳಕೆಯವರಗಿನ ರಸ್ತೆಯ ಬದಿಯಲ್ಲಿ ಹಳೆ ತಾಳೆ ಮರಗಳು ಒಣಗಿ ನಿಂತಿದ್ದವು. ಮಳೆಗಾಲ ಆರಂಭವಾದ ಬಳಿಕ ತಾಲೂಕಿನಾದ್ಯಂತ ಗಾಳಿ ಮಳೆಗೆ ಮರಗಳು ಉರುಳಿಬಿದ್ದು ಬಂಟ್ವಾಳ ತಾಲೂಕಿನಾದ್ಯಂತ ನೂರಾರು ಅವಘಡಗಳು ಸಂಭವಿಸಿದ್ದರೂ ಹೆದ್ದಾರಿ ಬದಿಯಿಂದ ಒಣಗಿದ ತಾಳೆ ಮರಗಳನ್ನು ತೆರವುಗೊಳಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿರಲಿಲ್ಲ. ಅಲ್ಲದೆ ಮಳೆಗಾಲದ ಆರಂಭದಲ್ಲಿ ಇದೇ ಪ್ರದೇಶದಲ್ಲಿ ರಸ್ತೆ ಬದಿಯಿದ್ದ ತಾಳೆ ಮರವೊಂದು ಆಲ್ಟೋ ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದರು.
ಈ ಬಗ್ಗೆ 'varthabharati.in' ವೆಬ್ ಸೈಟ್ ಮೂರು ದಿನಗಳ ಹಿಂದೆ ವಿವರವಾದ ವರದಿಯೊಂದನ್ನು ಪ್ರಕಟಿಸಿದ ಬಳಿಕ ಎಚ್ಚೆತ್ತುಕೊಂಡ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ರಸ್ತೆ ಬದಿಯಲ್ಲಿದ ಹಳೆ ತಾಳೆ ಮರಗಳನ್ನು ಕಡಿದು ತೆರವುಗೊಳಿಸಿದ್ದಾರೆ. ಅಪಾಯಕಾರಿ ಮರಗಳನ್ನು ತೆರವುಗೊಳಿಸಿದ ಬಳಿಕ ಈ ಪ್ರದೇಶದಲ್ಲಿ ವಾಹನ ಸವಾರರು ನೆಮ್ಮದಿಯಿಂದ ಸಂಚಾರಿಸುವಂತಾಗಿದೆ.





