ಗಣಪತಿ ಆತ್ಮಹತ್ಯೆ ಪ್ರಕರಣ ; ವಿಧಾನ ಸಭೆಯಲ್ಲಿ ಆಡಳಿತ ಪಕ್ಷದ ಮೇಲೆ ವಿಪಕ್ಷ ಸವಾರಿ

ಬೆಂಗಳೂರು, ಜು.12: ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಜಾರ್ಜ್ ತಲೆ ದಂಡಕ್ಕೆ ಒತ್ತಾಯಿಸಿ ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನ ಮಂಡಲದ ಉಭಯ ಸದನಗಳಲ್ಲೂ ಗಲಾಟೆ ಮುಂದುವರಿಸಿದ್ದಾರೆ. ವಿಧಾನಸಭೆಯಲ್ಲಿ ಸಚಿವರಾದ ಜಾರ್ಜ್ ಮತ್ತು ರಮಾನಾಥ ರೈ ನೀಡಿದ ಹೇಳಿಕೆ ವಿರುದ್ಧ ವಿಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದ ಪರಿಣಾಮವಾಗಿ ಗೊಂದಲ ಉಂಟಾಗಿ ಪರಿಸ್ಥಿತಿಯ ನಿಯಂತ್ರಣಕ್ಕೆ ಮಾರ್ಷಲ್ ಗಳು ಮಧ್ಯ ಪ್ರವೇಶಿಸಬೇಕಾಯಿತು.
ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಗಲಾಟೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕಲಾಪವನ್ನು ಸ್ವೀಕರ್ ಕೆ.ಬಿ. ಕೋಳಿವಾಡ್ ಅವರು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.
ವಿಧಾನಸಭೆಯಲ್ಲಿ ಶಾಸಕ ಲಕ್ಷ್ಮಣ್ ಸವದಿ ಅವರು ನನ್ನ ಮೇಲೆ ಆರೋಪ ಕಂಡು ಬಂದಾಗ ರಾಜೀನಾಮೆ ನೀಡಿದ್ದೆ. ಆದರೆ ಇದೀಗ ಜಾರ್ಜ್ ರಾಜೀನಾಮೆ ಕೊಡುತ್ತಾರೋ ? ಎಂದು ಪ್ರಶ್ನಿಸಿದರು. ಆಗ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ಕಂಡು ಬಂತು. ಬಿಜೆಪಿ ಸದಸ್ಯರ ಗಲಾಟೆ ಜೋರಾದಾಗ ಸಚಿವ ಬಿ.ರಮಾನಾಥ ರೈ ಕುರ್ಚಿಯಿಂದ ಎದ್ದು ಬಂದರು. ಆಗ ಬಿಜೆಪಿ ಸದಸ್ಯರ ಗಲಾಟೆ ಇನ್ನಷ್ಟು ಹೆಚ್ಚಾಯಿತು. ನೀವು ಸದನದಲ್ಲಿ ಏನು ಮಾಡಿದ್ದರೆಂದು ಗೊತ್ತಿದೆ. ಸದನದಲ್ಲಿ ಬ್ಲೂ ಫಿಲ್ಮ್ ನೋಡಿದ್ದಿರಿ '' ಎಂದು ಸಚಿವ ರೈ ಗುಡುಗಿದರು. ರೈ ವಿರುದ್ಧ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದಾಗ ಅವರ ಸಹಾಯಕ್ಕೆ ಕಾಂಗ್ರೆಸ್ ನ ಶಾಸಕರು ಮುಂದಾದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.







