ದಲಿತ ಕುಟುಂಬಕ್ಕೆಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ : ವೀಡಿಯೋ ವೈರಲ್

ಚೆನ್ನೈ,ಜು.12 : ಚಿನ್ನದಂಗಡಿಯಲ್ಲಿ ಶಾಪಿಂಗ್ ನಡೆಸಿ ಹಿಂದಿರುಗುತ್ತಿದ್ದ ವೇಳೆ ಯಾವುದೋ ಕಾರಣಕ್ಕೆ ರಸ್ತೆಬದಿಯಲ್ಲಿಯೇ ಜಗಳವಾಡುತ್ತಿದ್ದ ದಲಿತ ದಂಪತಿಯೊಂದನ್ನು ಕಂಡ ಪೊಲೀಸರು ಅವರಿಗೆ ಚೆನ್ನಾಗಿ ಥಳಿಸಿದರಲ್ಲದೆ, ದಂಪತಿಗಳ ರಕ್ಷಣೆಗೆ ಬಂದ ಅವರ ಪುತ್ರನ ಮೇಲೂ ಹಲ್ಲೆ ನಡೆಸಿದ ಘಟನೆ ತಿರುವನ್ನಮಲೈ ಜಿಲ್ಲೆಯ ಚೆಂಗಮ್ ನಿಂದ ಸೋಮವಾರ ವರದಿಯಾಗಿದೆ. ಈ ಘಟನೆಯನ್ನು ರಸ್ತೆಯಲ್ಲಿ ಹೋಗುವವರು ಯಾರೋ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಿಟ್ಟಿದೆ.
ಪೊಲೀಸರ ಹಲ್ಲೆಯಿಂದ ಗಾಯಗೊಂಡಿರುವ ಆಟೋರಿಕ್ಷಾ ಚಾಲಕ ರಾಜಾ(45), ಆತನ ಪತ್ನಿ ಉಷಾ(40) ಹಾಗೂ ಅವರ ಪುತ್ರ ಸೂರ್ಯನನ್ನು(18) ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಎಸ್ಪಿ ಆರ್ ಪೊನ್ನಿ, ಪೊಲೀಸ್ ಸಿಬ್ಬಂದಿಗಳಾದ ನಮಲವರ್, ಮುರುಗನ್ ಹಾಗೂ ವಿಜಯ್ ಕುಮಾರ್ ಅವರನ್ನು ವೆಲ್ಲೂರಿನ ಮೀಸಲು ಪಡೆಗೆ ವರ್ಗಾಯಿಸಿದ್ದಾರಲ್ಲದೆ ಘಟನೆ ಬಗ್ಗೆ ಇಲಾಖಾ ತನಿಖೆಗೂ ಆದೇಶಿಸಿದ್ದಾರೆ.
ಚಿನ್ನದಂಗಡಿಯಿಂದ ಹಿಂದಿರುಗುವಾಗ ದಂಪತಿಗಳು ಜಗಳಕ್ಕೆ ಶುರುವಿಟ್ಟುಕೊಂಡಾಗ ರಾಜಾ ತನ್ನ ಪತ್ನಿ ಮೇಲೆ ಕೈ ಮಾಡಿದ್ದನೆನ್ನಲಾಗಿದೆ. ಇದನ್ನು ನೋಡಿದ ಅಲ್ಲಿಯೇ ಇದ್ದ ಪೊಲೀಸ್ ಸಿಬ್ಬಂದಿ ಮಧ್ಯ ಪ್ರವೇಶಿಸಿದಾಗ ಆತ ಅದು ತಮ್ಮ ವೈಯಕ್ತಿಕ ವಿಚಾರವೆಂದು ಹೇಳಿ ಅವರನ್ನು ದೂರ ಸರಿಸಲು ಯತ್ನಿಸಿದಾಗ ಕೋಪಗೊಂಡ ಪೊಲೀಸರು ಅವರಿಗೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.
ಹಲ್ಲೆ ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದ ಗ್ರಾಮಸ್ಥರು ರಸ್ತೆ ತಡೆಯನ್ನೂ ನಡೆಸಿದರು.







