ಕಾಶ್ಮೀರ ಪರಿಸ್ಥಿತಿ ಅವಲೋಕನಾ ಸಭೆಗೆ ಕಾಶ್ಮೀರದ ಪ್ರತಿನಿಧಿ ಗೈರು : ಉಮರ್ ಅಬ್ದುಲ್ಲ ಟೀಕೆ

ಹೊಸದಿಲ್ಲಿ,ಜುಲೈ 12: ಪ್ರಧಾನಿ ಮೋದಿ ನೇತೃತ್ವದಲ್ಲಿ ಜಮ್ಮುಕಾಶ್ಮೀರದ ಪರಿಸ್ಥಿತಿಯನ್ನು ಅವಲೋಕಿಸಲು ಸೇರಿದ ಉನ್ನತ ಮಟ್ಟದ ಸಭೆಗೆ ಕಾಶ್ಮೀರದ ಯಾವುದೇ ಪ್ರತಿನಿಧಿಯನ್ನು ಕರೆದಿಲ್ಲ ಎಂದು ಉಮರ್ ಅಬ್ದುಲ್ಲ ಟೀಕಿಸಿದ್ದಾರೆ. ಹಿಝ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿಯ ಹತ್ಯೆಯ ನಂತರ ಕಾಶ್ಮೀರದಲ್ಲಿ ಉದ್ಭವಿಸಿದ ಸಂಘರ್ಷವಾಸ್ಥೆಯ ಕುರಿತು ಚರ್ಚಿಸಲು ಕಾಶ್ಮೀರದ ಯಾವುದೇ ಪ್ರತಿನಿಧಿಯ ಉಪಸ್ಥಿತಿಯಿಲ್ಲದೆ ಉನ್ನತ ಮಟ್ಟದ ಸಭೆ ನಡೆಯುತ್ತಿದ್ದು ಇದನ್ನು ಉಮರ್ ಅಬ್ದುಲ್ಲ ಪ್ರಶ್ನಿಸಿದ್ದಾರೆ.
"ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿಗೆ ಈಗ ಕಾಶ್ಮೀರ ಬಿಟ್ಟು ಹೋಗಲು ಸಾಧ್ಯವಿಲ್ಲದ ಸ್ಥಿತಿಯಿದೆ. ಆದರೆ ವೀಡಿಯೊ ಕಾನ್ಫ್ರೆನ್ಸ್ ಮೂಲಕವಾದರೂ ರಾಜ್ಯದ ಮುಖ್ಯಮಂತ್ರಿಯನ್ನು ಸಭೆಯಲ್ಲಿ ಪಾಲ್ಗೊಳಿಸಬಹುದಿತ್ತು. ಅಗತ್ಯವಿಲ್ಲದ ಅನೇಕ ವಿಷಯಗಳಿಗೆ ನಾವು ವೀಡಿಯೊ ಕಾನ್ಫ್ರೆನ್ಸ್ ನಡೆಸುತ್ತೇವೆ. ಆದರೆ ಇಂತಹ ಸಂದರ್ಭಗಳಲ್ಲಿ ಅದು ಬಳಕೆಯಾಗಬೇಕಿತ್ತು" ಎಂದು ಉನ್ನತಮಟ್ಟದ ಸಭೆಯಲ್ಲಿ ರಾಜ್ಯದ ಪ್ರತಿನಿಧಿಗಳಿಗೆ ಪ್ರಾತಿನಿಧ್ಯ ಒದಗಿಸಿದ್ದನ್ನು ಟೀಕಿಸಿ ಉಮರ್‌ಅಬ್ದುಲ್ಲ ಟ್ವೀಟ್ ಮಾಡಿದ್ದಾರೆಂದು ವರದಿಯಾಗಿದೆ.
ಸಭೆಯಲ್ಲಿ ಗೃಹಸಚಿವ ರಾಜ್‌ನಾಥ ಸಿಂಗ್, ವಿತ್ತಸಚಿವ ಅರುಣ್ ಜೇಟ್ಲಿ, ವಿದೇಶ ಸಚಿವ ಸುಷ್ಮಾ ಸ್ವರಾಜ್, ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದಾವಲ್.ವಿದೇಶ ಕಾರ್ಯದರ್ಶಿ ಎಸ್.ಜೈಶಂಕರ್ ಮುಂತಾದವರು ಭಾಗವಹಿಸಿದ್ದಾರೆಂದು ವರದಿ ತಿಳಿಸಿದೆ.





