ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣದ ಅಗತ್ಯ ಇದೆ: ಪ್ರೊ. ಅನಂತಪದ್ಮನಾಭ ರಾವ್

ಕೊಣಾಜೆ, ಜು.12: ವಿದ್ಯೆ ಎಂಬುದು ನಾಲ್ಕು ಚಕ್ರಗಳ ಮೇಲೆ ಓಡುವ ರಥವಾಗಿದ್ದು, ಪೋಷಕರು, ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಆಡಳಿತ ವರ್ಗ ಒಬ್ಬರಿಗೊಬ್ಬರು ಪೂರಕವಾಗಿದ್ದರೆ ಮಾತ್ರ ಮೌಲ್ಯಯುತ ಶಿಕ್ಷಣವನ್ನು ವ್ಯವಸ್ಥಿತವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಮೌಲ್ಯಗಳು ಮತ್ತು ನೈತಿಕತೆಯನ್ನು ವಿದ್ಯಾರ್ಥಿಗಳು ಎಳವೆಯಲ್ಲೇ ಪೊಷಕರು ನೀಡಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಎಸ್.ವಿ.ಎಸ್. ಕಾಲೇಜು ಬಂಟ್ವಾಳದ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ ಅನಂತಪದ್ಮನಾಭ ರಾವ್ ಅಭಿಪ್ರಾಯಪಟ್ಟರು.
ಅವರು ಕೊಣಾಜೆ ನಡುಪದವಿನ ಪಿ.ಎ. ಪಾಲಿಟೆಕ್ನಿಕ್ ಕಾಲೇಜಿನ ಪ್ರಥಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳ ಪ್ರವೇಶೋತ್ಸವ ಮತ್ತು ಓರಿಯಂಟೇಶನ್ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಹೆತ್ತವರು ಸಾವಿರಾರು ರೂ.ಗಳನ್ನು ವ್ಯಯಿಸುತ್ತಾರೆ. ಹಣ ವ್ಯಯಿಸುವುದರೊಂದಿಗೆ ತಮ್ಮ ಮಕ್ಕಳು ಕಲಿಕೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರಾ ಎನ್ನುವ ಕಡೆ ಗಮನ ಮುಖ್ಯ. ವಿದ್ಯಾರ್ಥಿಗಳನ್ನು ಅಡ್ಡದಾರಿಯಲ್ಲಿ ಹೋಗದಂತೆ ಮುನ್ನಡೆಸುವ ಕಾರ್ಯ ಹೆತ್ತವರಾಗಿದ್ದು, ಇದರೊಂದಿಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ನಡೆದಾಗ ವಿದ್ಯಾರ್ಥಿಗಳನ್ನು ಮೌಲ್ಯಯುತ ಶಿಕ್ಷಣದೊಂದಿಗೆ ಭವಿಷ್ಯದ ಪ್ರಜೆಯನ್ನಾಗಿ ರೂಪಿಸಲು ಸಾಧ್ಯ ಎಂದರು.
ಪಿ.ಎ.ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ಪಿ.ಸೂಫಿ ಮಾತನಾಡಿ, ಪಿ.ಎ. ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜು ದೇಶದ ಅಗ್ರಮಾನ್ಯ ಕಾಲೇಜುಗಳಲ್ಲಿ ಒಂದಾಗಿದ್ದು, ಉನ್ನತ ಗುಣಮಟ್ಟದ ಶಿಕ್ಷಣದೊಂದಿಗೆ ಮೂಲಭೂತ ಸೌಕರ್ಯವನ್ನು ಹೊಂದಿದ್ದು, ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಮುಂದಿನ ಸ್ಪರ್ಧಾತ್ಮಕ ವೃತ್ತಿ ಜೀವನಕ್ಕೆ ಬೇಕಾದ ರೀತಿಯಲ್ಲಿ ಶಿಕ್ಷಣ ನೀಡಲಾಗುತ್ತದೆ. ಇದು ಜ್ಞಾನಾರ್ಜನೆಯ ಕೇಂದ್ರವಾಗಿದ್ದು, ಹೆತ್ತವರು ವಿದ್ಯಾರ್ಥಿಗಳನ್ನು ಕಾಲೇಜಿಗೆ ಸೇರ್ಪಡೆಗೊಳಿಸಿದರೆ ಸಾಲದು. ವಿದ್ಯಾರ್ಥಿಗಳ ಶೈಕ್ಷಣಿಕ ವಿಚಾರದಲ್ಲಿ ಕಾಲೇಜಿನ ಮುಖ್ಯಸ್ಥರೊಂದಿಗೆ ವಿಚಾರಣೆ ನಡೆಸುತ್ತಿರಬೇಕು. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಹೆಸರು ಗಳಿಸಿದರೆ ಕಾಲೇಜಿಗೂ, ಹೆತ್ತವರಿಗೂ ಹೆಸರು ಎಂದರು.
ಕಾರ್ಯಕ್ರಮದಲ್ಲಿ ಪಿ.ಎ. ಇಂಜಿನಿಯರಿಂಗ್ ಕಾಲೆಜೀನ ಆಡಳಿತ ನಿರ್ದೇಶಕ ಕೆ.ಎಂ. ಹನೀಫ್, ಉಪ ಪ್ರಾಂಶುಪಾಲ ಡಾ. ರಮೀಝ್ ಕೆ., ಅಕಾಡೆಮಿಕ್ ನಿದೇರ್ಶಕ ಡಾ. ಸರ್ಫರಾಝ್ ಹಾಶಿಂ ಜೆ., ಕಾಲೇಜಿನ ಆಡಳಿತ ವ್ಯವಹಾರ ವಿಭಾಗದ ನಿರ್ದೇಶಕ ಡಾ. ಬೀರಾನ್ ಮೊಯ್ದೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪಿ.ಎ.ಪಾಲಿಟೆಕ್ನಿಕ್ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ.ಇಸ್ಮಾಯೀಲ್ ಖಾನ್ ಸ್ವಾಗತಿಸಿದರು. ಕಾಲೇಜಿನ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಪ್ರೊ.ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಹರೀಶ್ ಕುಮಾರ್ ಅತಿಥಿಗಳನ್ನು ಪರಿಚಯಿಸಿದರು. ಸಿವಿಲ್ ವಿಭಾಗದ ಮುಖ್ಯಸ್ಥ ಪ್ರೊ. ಅಲಿ ಅಶ್ರಫ್ ವಂದಿಸಿದರು.







