ಹಾಸನ: ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ವಾಹನಗಳ ಎತ್ತಂಗಡಿ
.jpg)
ಹಾಸನ, ಜು.12: ವಾಹನ ನಿಲುಗಡೆ ನಿಷೇಧ ಎಂಬ ನಾಮಪಲಕ ಇದ್ದರೂ ಕೂಡ ವಾಹನ ಚಾಲಕರು ಲೆಕ್ಕಿಸದೆ ಪ್ರತಿನಿತ್ಯ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಮಂಗಳವಾರ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.
ನಗರದ ಆರ್.ಸಿ. ರಸ್ತೆ, ಎಸ್ಪಿ ಕಚೇರಿ ಬಳಿ ಇರುವ ಸರಕಾರಿ ಆಸ್ಪತ್ರೆಯ ಮುಂದೆ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ದೊಡ್ಡದಾಗಿ ಬರೆದಿದ್ದರೂ ಆಸ್ಪತ್ರೆಗೆ ಹೋಗುವ ವಾಹನ ಚಾಲಕರು ಯಾವುದನ್ನು ಲೆಕ್ಕಿಸದೆ ದಿನನಿತ್ಯ ವಾಹನಗಳನ್ನು ಇಲ್ಲಿ ನಿಲ್ಲಿಸುತ್ತಿದ್ದರು. ಅನೇಕ ಬಾರಿ ಪೊಲೀಸ್ ಸಿಬ್ಬಂದಿ ತೆರವುಗೊಳಿಸಿದ್ದರೂ ಕೂಡ ಮತ್ತೆ ಮತ್ತೆ ಮರುಕಳಿಸುತ್ತಿರುವುದು ಪೊಲೀಸ್ ಇಲಾಖೆಗೆ ತಲೆ ನೋವಾಗಿತ್ತು.
ಮಂಗಳವಾರ ಬೆಳಗ್ಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಅನೇಕ ಬೈಕುಗಳನ್ನು ಕೊಂಡೊಯ್ದರು. ಉಳಿದ ವಾಹನಗಳಿಗೆ ಲಾಕ್ ಹಾಕಲು ಮುಂದಾದರು. ಅಲ್ಲೇ ಇದ್ದ ಕೆಲ ವಾಹನ ಚಾಲಕರಿಗೆ ಬುದ್ಧಿಮಾತು ಹೇಳಿ ಕಳುಹಿಸಲಾಯಿತು. ಮುಂದೆ ಮತ್ತೆ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳು ಕಂಡು ಬಂದರೆ ಕಾನೂನು ಕ್ರಮ ಜರಗಿಸುವುದಾಗಿ ಎಚ್ಚರಿಸಿದರು.
.





