ಬಿ.ಸಿ.ರೋಡ್: ಸಚಿವ ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಎಬಿವಿಪಿಯಿಂದ ಧರಣಿ
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ

ಬಂಟ್ವಾಳ, ಜು. 12: ಮಂಗಳೂರು ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಪಡೆಯಬೇಕು ಹಾಗೂ ಆರೋಪಿತ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಘಟಕದ ವತಿಯಿಂದ ಮಂಗಳವಾರ ಬಿ.ಸಿ.ರೋಡಿನಲ್ಲಿ ಧರಣಿ ಜರಗಿತು.
ಪ್ರತಿಭಟನೆಯನ್ನುದ್ದೇಶಿಸಿ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರಶಾಂತ್ ಶೆಟ್ಟಿ ಮಡಂತ್ಯಾರು, ಪ್ರಮುಖರಾದ ಶಿವಾನಂದ್, ನಿತಿನ್ ಕರ್ಕೇರಾ ಮಾತನಾಡಿ, ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳ ಆತ್ಮಹತ್ಯೆ ಘಟನೆಗಳು ಮರುಕಳಿಸುತ್ತಿದ್ದರೂ ರಾಜ್ಯ ಸರಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಪೊಲೀಸ್ ಇಲಾಖೆಯನ್ನು ಬಲಿ ಕೊಡಲಾಗುತ್ತಿದೆ ಎಂದು ಆರೋಪಿಸಿದರು.
ಎಬಿವಿಪಿಯ ಮಂಗಳೂರು ವಿಭಾಗ ಸಂಚಾಲಕ ಪ್ರಣಮ್ ರಾಜ್, ಬಂಟ್ವಾಳ ತಾಲೂಕು ಸಂಚಾಲಕ ಪ್ರಮೋದ್ ಎನ್., ಪ್ರಮುಖರಾದ ಹರ್ಷಿತ್, ಕಾರ್ತಿಕ್, ಕಮಲಾಕ್ಷ, ಮನೋಜ್, ಪವನ್ ಮೊದಲಾದವರಿದ್ದರು. ಬಳಿಕ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.





