ಗಣಪತಿಗೆ ಕಿರಕುಳ ನೀಡಿಲ್ಲ ತಪ್ಪಿತಸ್ಥನಾದರೆ ಶಿಕ್ಷೆ ಅನುಭವಿಸಲು ಸಿದ್ಧ: ಕೆ.ಜೆ.ಜಾರ್ಜ್

ಬೆಂಗಳೂರು, ಜು.12: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ವಿಚಾರವು ನನಗೆ ಆಘಾತ ಹಾಗೂ ನೋವು ಉಂಟು ಮಾಡಿದೆ. ನನ್ನ 45 ವರ್ಷಗಳ ರಾಜಕೀಯ ಜೀವನದಲ್ಲಿ ಎಂದಿಗೂ ದ್ವೇಷದ ರಾಜಕಾರಣವನ್ನು ಮಾಡಿಲ್ಲ. ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಿಲ್ಲ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಣೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ಅವರು ಸ್ಪಷ್ಟಣೆ ನೀಡಿದರು.
1969ರಲ್ಲಿ ನಾನು ಕೊಡಗು ಜಿಲ್ಲೆಯ ಒಂದು ಸಣ್ಣ ಊರಿನಿಂದ ರಾಜಕೀಯ ಪ್ರವೇಶಿಸಿದೆ. ನಾನು ಶಾಸಕ, ಸಚಿವನಾಗುತ್ತೇನೆ ಎಂದು ಕನಸಿನಲ್ಲಿಯೂ ಅಂದು ಕೊಂಡಿರಲಿಲ್ಲ. ವೀರೇಂದ್ರಪಾಟೀಲ್ ಅವರ ಸರಕಾರದಲ್ಲಿ ನಾನು ಸಚಿವನಾಗಿ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದರು.
2013ರ ಜೂ.18 ಹಾಗೂ 19ರಂದು ನಾನು ಉಡುಪಿ ಹಾಗೂ ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗಣಪತಿ ವಿರುದ್ಧ ಯಾರೂ ನನಗೆ ದೂರು ನೀಡಿಲ್ಲ. 2013ರ ಸೆ.26ರಂದು ರಾಜಗೋಪಾಲನಗರ ಪೊಲೀಸ್‌ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ನಿಯುಕ್ತಿಗೊಂಡರು ಎಂದು ಅವರು ತಿಳಿಸಿದರು. ಐದಾರು ತಿಂಗಳ ನಂತರ ಗಣಪತಿ ವಿರುದ್ಧ ಬಂದ ಒಂದು ದೂರಿನ ಹಿನ್ನೆಲೆಯಲ್ಲಿ ನಗರ ಪೊಲೀಸ್‌ಆಯುಕ್ತರಾಗಿದ್ದ ರಾಘವೇಂದ್ರ ಔರಾದ್ಕರ್ ಅವರನ್ನು 2014 ಮಾ.10ರಂದು ಅಮಾನತ್ತು ಮಾಡಿದರು. ಇದರಲ್ಲಿ ನನ್ನ ಹಸ್ತಕ್ಷೇಪವೇನು ಇರಲಿಲ್ಲ ಎಂದು ಜಾರ್ಜ್ ಸ್ಪಷ್ಟಣೆ ನೀಡಿದರು.
ನಾನು ಅವರ ವಿರುದ್ಧ ದ್ವೇಷ ಸಾಧನೆ ಮಾಡಿದ್ದರೆ, ಕಿರುಕುಳ ನೀಡಿದ್ದರೆ ಒಂದೇ ತಿಂಗಳಲ್ಲಿ ಅವರ ವಿರುದ್ಧದ ಅಮಾನತ್ತು ಆದೇಶ ರದ್ದಾಗಿ ಅವರು ಕರ್ತವ್ಯಕ್ಕೆ ಮರಳುತ್ತಿದ್ದರೆ? ಇನ್ನು ಅವರ ಭಡ್ತಿಗೆ ಸಂಬಂಧಿಸಿದ ಕಡತ ನನ್ನ ಬಳಿ ಬಂದೇ ಇರಲಿಲ್ಲ. ಪರಮೇಶ್ವರ್ ಅವರು ಗೃಹ ಸಚಿವರಾದ ನಂತರ ಕಡತ ಅವರ ಬಳಿ ಬಂತು, ಆನಂತರ ಭಡ್ತಿ ನೀಡಲಾಗಿದೆ ಎಂದು ಅವರು ಹೇಳಿದರು.
‘ನಾನು-ಜಾರ್ಜ್, ನೀವು-ಶೆಟ್ಟರ್’ ಎನ್ನುವ ಕಾರಣಕ್ಕೆ ನನ್ನ ವಿರುದ್ಧ ಆಪಾದನೆಗಳನ್ನು ಮಾಡುತ್ತಿದ್ದೀರಾ ಎನ್ನುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರು ಜಾರ್ಜ್ ವಿರುದ್ಧ ಮುಗಿಬಿದ್ದರು. ನಿಮ್ಮ ವಿರುದ್ಧದ ಆಪಾದನೆಗಳನ್ನು ಸಮರ್ಥಿಸಿಕೊಳ್ಳಲು ಜಾತಿ, ಧರ್ಮವನ್ನು ಬಳಕೆ ಮಾಡಿಕೊಳ್ಳಬೇಡಿ ಎಂದು ಕಿಡಿಗಾರಿದರು. ಬಳಿಕ ಮಾತು ಮುಂದುವರೆಸಿದ ಕೆ.ಜೆ.ಜಾರ್ಜ್, ನಾನು ಯಾವುದೇ ತಪ್ಪು ಮಾಡಿಲ್ಲ. ತನಿಖೆಯಾಗಲಿ ನನ್ನ ವಿರುದ್ಧದ ಆಪಾದನೆಗಳು ಸಾಬೀತಾದರೆ ಕಾನೂನು ರೀತಿ ಯಾವುದೆ ಶಿಕ್ಷೆಗೆ ಗುರಿಯಾಗಲು ನಾನು ಸಿದ್ಧನಿದ್ದೇನೆ. ಆದರೆ, ನನ್ನ ಮೇಲಿನ ಆರೋಪ ಸಾಬೀತಾಗದೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಭಾವುಕವಾಗಿ ನುಡಿದರು.
ನಾನು ಗಣಪತಿ ಸೇರಿದಂತೆ ಯಾವೊಬ್ಬ ಅಧಿಕಾರಿಗೂ ಕಿರುಕುಳ ನೀಡಿರುವ ಕುರಿತು ಒಂದೇ ಒಂದು ಸಾಕ್ಷಿಯಿಲ್ಲ. ಗಣಪತಿಗೆ ಅಧಿಕಾರಿಗಳು ಕಿರುಕುಳ ನೀಡಿದ್ದರೆ ಐಜಿ, ಡಿಜಿ, ನನಗೆ ಅಥವಾ ಮುಖ್ಯಮಂತ್ರಿಗೆ ದೂರು ನೀಡಬಹುದಿತ್ತು ಎಂದ ಅವರು, ನನ್ನ ನಾಯಕರು ಮುಖ್ಯಮಂತ್ರಿ. ಅವರು ಕೇಳಿದರೆ ನಾನು ರಾಜೀನಾಮೆ ನೀಡುತ್ತೇನೆ. ನೀವು ಕೇಳಿದರೆ ರಾಜೀನಾಮೆ ನೀಡಲು ಸಾಧ್ಯವಿಲ್ಲ ಎಂದರು.







