ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಬಿಜೆಪಿಯಿಂದ ಡಿಸಿ ಕಚೇರಿಗೆ ಮುತ್ತಿಗೆ

ಮಂಗಳೂರು, ಜು. 12: ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿ ಹಾಗೂ ಸಚಿವ ಕೆ.ಜೆ. ಜಾರ್ಜ್, ಎ.ಎಂ.ಪ್ರಸಾದ್ ಮತ್ತು ಪ್ರಣವ್ ಮೊಹಾಂತಿ ಅವರ ಬಂಧನಕ್ಕೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾ ಸಭೆ ನಡೆಸಿದರು. ಬಳಿಕ ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಒಳ ನುಗ್ಗಿದಾಗ ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಗೇಟ್ ಬಂದ್ ಮಾಡಿ, ಬ್ಯಾರಿಕೇಡ್ ಅಳವಡಿಸಿದರು. ಆದರೆ ಅದನ್ನು ದೂಡಿ ಒಳನುಗ್ಗಿದ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ನೇತೃತ್ವದ ತಂಡ ಜಿಲ್ಲಾಧಿಕಾರಿ ಚೇಂಬರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿತು. ಆದರೆ ಕಚೇರಿಯ ಪ್ರಮುಖ ಬಾಗಿಲನ್ನು ಮುಚ್ಚಿದ್ದರಿಂದ ಕಚೇರಿಗೆ ನುಗ್ಗಲಾಗಲಿಲ್ಲ.
ಅನಂತರ ಡಿಸಿ ಕಚೇರಿ ಆವರಣದಲ್ಲಿಯೇ ಕುಳಿತು ಘೋಷಣೆಗಳನ್ನು ಕೂಗತೊಡಗಿದ ಬಿಜೆಪಿ ಕಾರ್ಯಕರ್ತರು, ಅರ್ಧ ಗಂಟೆಗೂ ಹೆಚ್ಚು ಕಾಲ ಅಲ್ಲೇ ಧರಣಿ ಕುಳಿತುಕೊಂಡರು. ಬಳಿಕ ಅಪರ ಜಿಲ್ಲಾಧಿಕಾರಿ ಕುಮಾರ್ ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಒಂದು ತಾಸಿನಿಂದ ಪ್ರತಿಭಟನೆ ನಡೆಸುತ್ತಿದ್ದರೂ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಬಾರದೇ ಇದ್ದುದಕ್ಕೆ ಅಪರ ಜಿಲ್ಲಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡರು.
ಸಚಿವ ಕೆ.ಜೆ.ಜಾರ್ಜ್, ಎ.ಎಂ.ಪ್ರಸಾದ್ ಹಾಗೂ ಪ್ರಣವ್ ಮೊಹಾಂತಿ ಅವರ ವಿರುದ್ಧ ಒಂದು ವಾರದೊಳಗೆ ಎಫ್‌ಐಆರ್ ದಾಖಲಿಸಿ ಬಂಧಿಸಬೇಕು. ಇಲ್ಲವಾದಲ್ಲಿ ಹೋರಾಟ ಇನ್ನಷ್ಟು ತೀವ್ರಗೊಳಿಸುವುದಾಗಿ ನಳಿನ್ ಕುಮಾರ್ ಎಚ್ಚರಿಕೆ ನೀಡಿದರು.
ಸಂಜೀವ ಮಠಂದೂರು ಮಾತನಾಡಿ, ಕೆ.ಜೆ.ಜಾರ್ಜ್ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು. ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಜಯರಾಮ ಶೆಟ್ಟಿ, ಬಿಜೆಪಿ ರಾಜ್ಯ ಘಟಕದ ಸುಲೋಚನಾ ಜಿ.ಕೆ.ಭಟ್, ಮಾಜಿ ಶಾಸಕರಾದ ಕೆ.ಮೋನಪ್ಪ ಭಂಡಾರಿ, ಪದ್ಮನಾಭ ಕೊಟ್ಟಾರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ರೈ, ಕ್ಯಾಪ್ಟನ್ ಬ್ರಿಜೇಶ್ ಚೌಟ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ಬಿಜೆಪಿ ಮುಖಂಡರಾದ ನಿತಿನ್ ಕುಮಾರ್, ಜಗದೀಶ್ ಅಧಿಕಾರಿ, ಉಮಾನಾಥ ಕೋಟ್ಯಾನ್, ಸತೀಶ್ ಪ್ರಭು, ರಹೀಂ ಉಚ್ಚಿಲ್, ಹರೀಶ್ ಮೂಡುಶೆಡ್ಡೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







