ಜಾನುವಾರು ಚರ್ಮ ಸಾಗಿಸುತ್ತಿದ್ದ ದಲಿತರ ಮೇಲೆ ದಾಳಿ
ಸಂಘಪರಿವಾರದ ಬೆಂಬಲಿಗರ ಕೃತ್ಯ ವಿವಸ್ತ್ರಗೊಳಿಸಿ ಭೀಕರ ಹಲ್ಲೆ; ಮೂವರ ಬಂಧನ

ದಾಳಿಯ ದೃಶ್ಯವನ್ನು ಅನ್‌ಲೈನ್‌ಗೆ ಅಪ್‌ಲೋಡ್ ಮಾಡಿದ ದುಷ್ಕರ್ಮಿಗಳು
ಅಹ್ಮದಾಬಾದ್,ಜು.14: ಜಾನುವಾರು ಚರ್ಮವನ್ನು ವಾಹನವೊಂದರಲ್ಲಿ ಸಾಗಿಸುತ್ತಿದ್ದ ಚರ್ಮೊದ್ಯಮ ಕಾರ್ಖಾನೆಯ ನಾಲ್ವರು ಕಾರ್ಮಿಕರ ಮೇಲೆ ದಾಳಿ ನಡೆಸಿದ ಸಂಘಪರಿವಾರದ ಕಾರ್ಯಕರ್ತರು, ಅವರನ್ನು ವಿವಸ್ತ್ರಗೊಳಿಸಿ ಹಿಗ್ಗಾಮಗ್ಗಾ ಥಳಿಸಿದ ಘಟನೆ ಸೋಮವಾರ ಗುಜರಾತ್‌ನ ಗಿರ್‌ಸೋಮನಾಥ್ ಎಂಬಲ್ಲಿ ನಡೆದಿದೆ. ಸೋಮವಾರ ಸಂಜೆ ನಡೆದ ಹಲ್ಲೆಯ ದೃಶ್ಯಗಳ ವಿಡಿಯೋಗಳನ್ನು ದಾಳಿಕೋರರು ಅಂತರ್‌ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ ಬಳಿಕ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.ವಿಡಿಯೋದಲ್ಲಿ ಸಂಘಪರಿವಾರದ ಕಾರ್ಯಕರ್ತರು, ಚರ್ಮಕಾರ್ಖಾನೆಯ ಕಾರ್ಮಿಕರ ವಿಚಾರಣೆ ನಡೆಸುತ್ತಿರುವ ಹಾಗೂ ಅವರನ್ನು ಹಿಗ್ಗಾಮಗ್ಗಾ ಥಳಿಸುವ ದೃಶ್ಯಗಳನ್ನು ತೋರಿಸಲಾಗಿದೆ.
‘‘ದನದ ಚರ್ಮ ನಿಮಗೆ ಎಲ್ಲಿ ದೊರೆಯಿತು?’’ ಎಂದು ದಾಳಿಕೋರನೊಬ್ಬ ಕಾರ್ಮಿಕರನ್ನು ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಅಮಾಯಕ ಕಾರ್ಮಿಕರನ್ನು ವಿವಸ್ತ್ರಗೊಳಿಸಿ ಕಾರಿಗೆ ಕಟ್ಟಿದ ದುಷ್ಕರ್ಮಿಗಳು, ಲಾಠಿಗಳಿಂದ ಅವರ ಬೆನ್ನಿಗೆ ಮೂರ್ಛೆತಪ್ಪುವಂತೆ ಬಾರಿಸುತ್ತಿರುವುದನ್ನು ಕೂಡಾ ವಿಡಿಯೋದಲ್ಲಿ ತೋರಿಸಲಾಗಿದೆ.
ಇಂದು ಬೆಳಿಗ್ಗೆ ಈ ಗುಂಪು ವಿಡಿಯೋವನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಿತ್ತು. ಇದರಿಂದಾಗಿ ಆರೋಪಿಗಳನ್ನು ಸುಲಭವಾಗಿ ಪತ್ತೆಹಚ್ಚಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಉಳಿದ ಇಬ್ಬರು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಈ ಮಧ್ಯೆ ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆಯ ನಾಯಕ ರಮೇಶ್ ಗೋಸ್ವಾಮಿ ಹೇಳಿಕೆಯೊಂದನ್ನು ನೀಡಿ, ಹಲ್ಲೆಗೊಳಗಾದ ವ್ಯಕ್ತಿಗಳು ಅಕ್ರಮವಾಗಿ ಗೋಮಾಂಸವನ್ನು ಸಾಗಿಸುತ್ತಿದ್ದರೆಂದು ಆರೋಪಿಸಿದ್ದಾನೆ.
‘‘ಕೆಲವರು ಗೋ ಹತ್ಯೆ ಮಾಡುತ್ತಿರುವ ಬಗ್ಗೆ ತಮಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಮುಂದಿನ ತನಿಖೆ ನಡೆಸಲಿದ್ದಾರೆಂದು ಅವರು ಹೇಳಿದ್ದ್ಜಾನೆ.
ಗೋಮಾಂಸ ಸೇವನೆ ಹಾಗೂ ಗೋಹತ್ಯೆಯ ನೆಪದಲ್ಲಿ ಅಮಾಯಕರ ಮೇಲೆ ಹಲ್ಲೆ ನಡೆಸುವ ಪುಂಡುಶಕ್ತಿಗಳನ್ನು ನಿಯಂತ್ರಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ವಿಫಲವಾಗಿದೆಯೆಂದು ಪ್ರತಿಪಕ್ಷಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಆಪಾದಿಸುತ್ತಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ಉತ್ತರಪ್ರದೇಶದ ದಾದ್ರಿಯಲ್ಲಿ ಗೋಮಾಂಸವನ್ನು ಸಂಗ್ರಹಿಸಿಟ್ಟಿದ್ದರೆಂದು ಆರೋಪಿಸಿ, ಮುಹಮ್ಮದ್ ಅಖ್ಲಾಕ್ ಎಂಬ ಮುಸ್ಲಿಂ ವ್ಯಕ್ತಿಯನ್ನು ಸಂಘಪರಿವಾದ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದರು.





