ನೆಟ್ಟಣಿಗೆ ಮುಡ್ನೂರು ಪ್ರೌಢ ಶಾಲೆಯಲ್ಲಿ ಕೋಟಿವೃಕ್ಷ ಅಭಿಯಾನ

ಪುತ್ತೂರು, ಜು.12: ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಹಾಗೂ ನೆಟ್ಟಣಿಗೆ ಮುಡ್ನೂರು ಪ್ರೌಢ ಶಾಲೆಯ ಜಂಟಿ ಆಶ್ರಯದಲ್ಲಿ ಕೋಟಿವೃಕ್ಷ ಅಭಿಯಾನ ಹಾಗೂ ವನಮಹೋತ್ಸವ ಕಾರ್ಯಕ್ರಮ ಪ್ರೌಢ ಶಾಲಾ ವಠಾರದಲ್ಲಿ ಸೋಮವಾರ ನಡೆಯಿತು.
ಗ್ರಾಪಂ ಉಪಾಧ್ಯಕ್ಷ ಶ್ರೀರಾಂ ಪಕ್ಕಳ ಗಿಡನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯೂ ಗಿಡಗಳನ್ನು ಪೋಷಿಸಿ ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕು. ಶಾಲೆ ಹಾಗೂ ತಮ್ಮ ಮನೆಗಳ ಸುತ್ತಗಿಡಗಳನ್ನು ಬೆಳಸುವುದರ ಮೂಲಕ ಪರಸರದ ಕುರಿತು ಹೆಚ್ಚಿನ ಕಾಳಜಿಯನ್ನು ಹೊಂದುವಂತಾಗಬೇಕು. ಗ್ರಾ.ಪಂ. ವತಿಯಿಂದ ಗ್ರಾಮದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಗಿಡ ನೆಡುವ ಮೂಲಕ ಸಹಕಾರ ನೀಡಬೇಕು ಎಂದು ಹೇಳಿದರು.
ಪುತ್ತೂರು ವಲಯ ಅರಣ್ಯಾಧಿಕಾರಿ ಕಾರ್ಯಪ್ಪ ಕೋಟಿ ವೃಕ್ಷ ಅಭಿಯಾನದ ಉದ್ದೇಶದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ನೆಟ್ಟಣಿಗೆ ಮುಡ್ನೂರು ತಾ.ಪಂ. ಸದಸ್ಯೆ ಪೌಝಿಯಾ, ಗ್ರಾ.ಪಂ. ಸದಸ್ಯರುಗಳಾದ ಮುಹಮ್ಮದ್ ಕೆ., ಇಬ್ರಾಹೀಂ. ಎಂ.ಬಿ., ಎಸ್‌ಡಿಎಂಸಿ ಸದಸ್ಯರುಗಳಾದ ಅಬ್ದುಲ್‌ಖಾದರ್ ಸುರುಳಿಮೂಲೆ, ಲೀಲಾವತಿ, ಸರೋಜಿನಿ, ಗೋಪಿ, ಮುಹಮ್ಮದ್ ಪಳ್ಳತ್ತೂರು, ಶಿಕ್ಷಕರಾದ ಅರುಣ್‌ಕುಮಾರ್, ಇಂದಿರಾ, ಕುಮಾರಿ ಮಮತಾ, ಕುಮಾರಿ ಪವಿತ್ರಾ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ನಝೀರ್ ಪಿ. ಸ್ವಾಗತಿಸಿದರು. ಶಿಕ್ಷಕಿ ಸುನಿತಾ ವಂದಿಸಿದರು. ದೇವಿಪ್ರಕಾಶ್ ಶೆಟ್ಟಿ ನಿರೂಪಿಸಿದರು.







