ಕಾನೂನು ಬಾಹಿರ ಕಲ್ಲುಕೋರೆಗಳಿಗೆ ಕಡಿವಾಣ
ಜಿಲ್ಲಾಧಿಕಾರಿ ಕ್ರಮಕ್ಕೆ ಸ್ಥಳೀಯರ ಪ್ರಶಂಸೆ
<ಬಿ. ರೇಣುಕೇಶ್
ಶಿವಮೊಗ್ಗ, ಜು. 12: ಕಲ್ಲುಕೋರೆಗಳ ಪರವಾನಿಗೆ ನವೀಕ ರಣ ಹಾಗೂ ಹೊಸ ಘಟಕಗಳ ಆರಂಭಕ್ಕೆ ಪರವಾನಿಗೆ ನೀಡುವ ಪ್ರಕ್ರಿಯೆಯನ್ನು ಶಿವಮೊಗ್ಗ ಜಿಲ್ಲಾಡಳಿತ ಅತ್ಯಂತ ಎಚ್ಚರಿಕೆಯಿಂದ ಕಾನೂನು ಪ್ರಕಾರ ನಡೆಸಲಾರಂಭಿಸಿದೆ. ನಿಯಮಕ್ಕೆ ವಿರುದ್ಧವಾಗಿ, ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಕಲ್ಲು ಕೋರೆಗಳ ಪರವಾನಿಗೆ ನವೀಕರಣ ಮಾಡದಿರಲು ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ನಿರಾಕರಿಸುವ ಮೂಲಕ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಮತ್ತೊಂದೆಡೆ ಕೆಲವು ಕಲ್ಲುಕೋರೆ ಮಾಲಕರು ಪ್ರಭಾವಿ ವ್ಯಕ್ತಿಗಳ ಮೂಲಕ ಲಾಬಿ ನಡೆಸಲಾರಂಭಿಸಿದ್ದು, ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿಯವರ ಮೇಲೆ ನಿರಂತರವಾಗಿ ಒತ್ತಡ ಹಾಕಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಯಾವುದೇ ಒತ್ತಡಕ್ಕೆ ಮಣಿಯದ ಜಿಲ್ಲಾಧಿಕಾರಿಯವರು ಪರಿಸರಕ್ಕೆ ಹಾನಿಯುಂಟು ಮಾಡುತ್ತಿರುವ, ನಿಯಮಕ್ಕೆ ವಿರುದ್ಧವಾಗಿ ಕಾರ್ಯಾಚರಿಸುತ್ತಿರುವ ಕಲ್ಲುಕೋರೆಗಳಿಗೆ ಪರವಾನಿಗೆ ನವೀಕರಿಸದಿರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಪರಿಸರಕ್ಕೆ ಹಾನಿಯುಂಟು ಮಾಡದೆ, ಕಾನೂನು ಪ್ರಕಾರ ಕಾರ್ಯಾಚರಿಸುತ್ತಿರುವ ಕಲ್ಲುಕೋರೆ ಗಳ ಕಾರ್ಯಾಚರಣೆಗೆ ಮಾತ್ರ ಅನುಮತಿ ನೀಡುತ್ತಿರುವ ಜಿಲ್ಲಾಧಿಕಾರಿಯವರ ಕ್ರಮವನ್ನು ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರು ಮುಕ್ತ ಕಂಠದಿಂದ ಸ್ವಾಗತಿಸುವಂತೆ ಮಾಡಿದೆ. ಜಿಲ್ಲಾಧಿಕಾರಿಯವರ ಈ ನಿರ್ಧಾರ ಕೆಲವು ಕಲ್ಲುಕೋರೆ ಮಾಲಕರ ನಿದ್ದೆಗೆಡುವಂತೆ ಮಾಡಿರುವುದಂತೂ ಸತ್ಯ.
ಆಕ್ಷೇಪಣೆಯಿರ ಬಾರದು:
ಪ್ರಸ್ತುತ ಕಲ್ಲುಕೋರೆಗಳ ನವೀಕರಣ, ಹೊಸದಾಗಿ ಘಟಕ ಆರಂಭಿಸುವುದು ಸೇರಿದಂತೆ ಸುಮಾರು 174 ಅರ್ಜಿಗಳು ಜಿಲ್ಲಾಡಳಿತದ ಮುಂದಿದೆ. ಪ್ರತಿಯೊಂದು ಅರ್ಜಿಗಳ ಬಗ್ಗೆ ಕಂದಾಯ ಹಾಗೂ ಅರಣ್ಯ ಇಲಾಖೆಯ ಅಭಿಪ್ರಾಯಗಳನ್ನು ಜಿಲ್ಲಾಡಳಿತ ಪಡೆಯುತ್ತಿವೆ. ಎರಡೂ ಇಲಾಖೆಗಳಿಂದ ನಿರಪೇಕ್ಷಣಾ ಪತ್ರ ದೊರಕುವ ಅರ್ಜಿಗಳನ್ನು ಮಾತ್ರ ಜಿಲ್ಲಾಧಿಕಾರಿಯವರು ವಿಲೇವಾರಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಕೆಲವು ಕಲ್ಲುಕೋರೆಗಳಲ್ಲಿ ಬೇಕಾಬಿಟ್ಟಿಯಾಗಿ ಸ್ಪೋಟಕಗಳ ಬಳಕೆ ಮಾಡಲಾಗುತ್ತಿದೆ. ಧೂಳಿನಿಂದ ಸುತ್ತಮುತ್ತಲಿನ ಗ್ರಾಮಗಳ ಜನ-ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ವಾಯು ಮಾಲಿನ್ಯ ಉಂಟಾಗುತ್ತಿದೆ. ಅರಣ್ಯ ಪ್ರದೇಶದಲ್ಲಿಯೂ ಕೋರೆಗಳು ನಡೆಯುತ್ತಿವೆ ಎಂಬ ಬಗ್ಗೆ ಸ್ಥಳೀಯರು ನೀಡಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿಯವರು, ಇಂತಹ ಕಲ್ಲುಕೋರೆಗಳನ್ನು ನಿಯಂತ್ರಣದಲ್ಲಿಡುವ ಸಲುವಾಗಿ ಕಠಿಣ ಕ್ರಮ ಕೈಗೊಂಡಿರುವುದಾಗಿ ಇಲಾಖೆಯ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಕೆಲವು ಕ್ವಾರಿಗಳ ಮಾಲಕರು ಪ್ರಭಾವಿ ವ್ಯಕ್ತಿಗಳ ಮೂಲಕ ಜಿಲ್ಲಾಧಿಕಾರಿಯವರ ಮೇಲೆ ಒತ್ತಡ ಹೇರುವ ಕೆಲಸ ನಡೆಸುತ್ತಿರುವ ಬಗ್ಗೆ ಅರಿತ ಜಿಲ್ಲಾಧಿಕಾರಿಯವರು, ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನು ಪ್ರಕಾರ ಅರ್ಜಿಗಳ ವಿಲೇವಾರಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ, ನಿಯಮಾನುಸಾರ ಅರ್ಜಿಗಳ ವಿಲೇವಾರಿಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಕಂದಾಯ ಇಲಾಖೆಯ ಅಧಿಕಾರಿಯೋರ್ವರು ಪತ್ರಿಕೆಗೆ ತಿಳಿಸಿದ್ದಾರೆ. ಒಟ್ಟಾರೆ ಕಲ್ಲುಕೋರೆಗಳ ಪರವಾನಿಗೆ ನವೀಕರಣ ಹಾಗೂ ಹೊಸ ಘಟಕಗಳ ಆರಂಭಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿಯವರು ತಳೆದಿರುವ ದೃಢ ನಿರ್ಧಾರ ಕಲ್ಲು ಗಣಿ ಮಾಲಕರಲ್ಲಿ ತಳಮಳ ಸೃಷ್ಟಿಸಿದೆಯಾದರೂ, ಸ್ಥಳೀಯರಿಂದ ಪ್ರಶಂಸೆಗೆ ಪಾತ್ರವಾಗಿದೆ.







