ರಾಸಾಯನಿಕ ಕಾರ್ಖಾನೆಗೆ ಗ್ರಾಮಸ್ಥರ ವಿರೋಧ
ಅಧಿಕಾರಿಗಳಿಗೆ ತರಾಟೆ

ಕಾರವಾರ, ಜು.12: ನಗರದ ಬೈತಖೋಲ ಎಂಬಲ್ಲಿ ರಾಸಾಯನಿಕ ಕಾರ್ಖಾನೆಯೊಂದು ಆರಂಭಿಸುತ್ತಿರುವ ಸಲುವಾಗಿ ಸ್ಥಳ ಪರಿಶೀಲನೆಗೆ ಬಂದಿದ್ದ ಕಂಪೆನಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡು ಪ್ರತಿಭಟಿಸಿದ ಘಟನೆ ಮಂಗಳವಾರ ನಡೆಸಿದೆೆ. ಬೈತಖೋಲ್ ಪ್ರದೇಶವನ್ನು ದಶಕಗಳ ಹಿಂದೆಯೇ ಬಂದರು ಇಲಾಖೆ ಸ್ವಾಧೀನ ಪಡಿಸಿಕೊಂಡಿತ್ತು. ಆದರೆ, ನಿರಾಶ್ರಿತರಿಗೆ ಸರಕಾರ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಆರೋಪಿಸಿದ್ದ ಗ್ರಾಮಸ್ಥರು ಬಂದರು ಇಲಾಖೆಗೆ ನಿವೇಶನ ನೀಡಲು ನಿರಾಕರಿಸಿ ಅದೇ ಸ್ಥಳದಲ್ಲಿ ವಾಸಿಸುತ್ತಿದ್ದರು. ಏಕಾಏಕಿ ಕಂಪೆನಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ಯಾವುದೇ ಕಾರಣಕ್ಕೂ ವಾಸವಾಗಿರುವ ಸ್ಥಳವನ್ನು ಕೈಗಾರಿಕೆಗಳಿಗೆ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡು ಪ್ರತಿಭಟಿಸಿದರು. ಅಲ್ಲದೆ, ಅನಾಮಿಕ ರಾಸಾಯನಿಕ ಕಾರ್ಖಾನೆ ನಿರ್ಮಾಣಕ್ಕೆಂದು ಅಲ್ಲಿನ ಕಾಡುಪ್ರದೇಶವನ್ನೂ ನಾಶ ಮಾಡಲಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಬೈತಖೋಲ್ ಸುತ್ತಲು ಸಾಕಷ್ಟು ಮನೆಗಳಿದ್ದು ನೂರಾರು ಮಂದಿ ವಾಸವಾಗಿದ್ದಾರೆ. ಈ ಭಾಗದಲ್ಲಿ ಏಕಾಏಕಿ ರಾಸಾಯನಿಕ ಕಾರ್ಖಾನೆ ಆರಂಭಿಸು ವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಅಲ್ಲದೆ, ಸೂಕ್ತ ಪರಿಹಾರ ಕಲ್ಪಿಸದ ಹೊರತು ಜಾಗ ನೀಡುವುದಿಲ್ಲ ಎಂದು ಸ್ಥಳೀಯರು ಕಂಪೆನಿಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರು ಹಾಗೂ ಕಂಪೆನಿಯವರ ಮನ ಒಲಿಸಲು ಯತ್ನಿಸಿದರಾದರೂ ಗ್ರಾಮಸ್ಥರ ಪ್ರತಿಭಟನೆಗೆ ಮಣಿದು ಅಧಿಕಾರಿಗಳು
ಬಂದ ದಾರಿಗೆ ಸುಂಕವಿಲ್ಲ ಎಂದು ಹಿಂದಿರುಗಬೇಕಾಯಿತು.







