ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಚಿವ ಸೀತಾರಾಂ ಸ್ಪಷ್ಟನೆ
ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣ

ಮಡಿಕೇರಿ ಜು.12 : ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ಮಂಗಳವಾರ ಕುಶಾಲನಗರ ಸಮೀಪದ ರಂಗಸಮುದ್ರದಲ್ಲಿರುವ ಡಿವೈಎಸ್ಪಿ ಎಂ. ಕೆ.ಗಣಪತಿ ಅವರ ಮನೆಗೆ ಭೆೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಬಳಿಕ ಗಣಪತಿ ಅವರ ತಂದೆ ಕುಶಾಲಪ್ಪ ಹಾಗೂ ಕುಟುಂಬದವರಿಗೆ ಜಿಲ್ಲಾ ಸಚಿವರು ಧೈರ್ಯ ತುಂಬಿದರು. ಗಣಪತಿ ಅವರು ಬೆಂಗಳೂರಿನ ಯಶವಂತಪುರ ಮತ್ತು ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ಮೂರು ವರ್ಷಗಳ ಕಾಲ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ದಕ್ಷತೆಯನ್ನು ಹತ್ತಿರದಿಂದ ಬಲ್ಲವನಾಗಿದ್ದು, ಅವರ ಸಾವಿಗೆ ನ್ಯಾಯ ದೊರಕಿಸಲು ಸರಕಾರ ಕುಟುಂಬದವರ ಜೊತೆಗಿದೆ ಎಂದು ಸಚಿವರು ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂ.ಕೆ. ಗಣಪತಿ ಅವರ ಸಾವು ದುರದೃಷ್ಟಕರ. ಗಣಪತಿ ಸಾವು ಸಂಬಂಧ ಈಗಾಗಲೇ ಸರಕಾರ ಸಿಐಡಿಗೆ ವಹಿಸಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದರು. ಈ ಸಂದರ್ಭ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ತಹಶೀಲ್ದಾರ್ ಬಿ.ಸಿ.ಶಿವಪ್ಪ, ಡಿವೈಎಸ್ಪಿ ಕುಮಾರ್, ಜಿ.ಪಂ.ಸದಸ್ಯರಾದ ಕೆ.ಪಿ.ಚಂದ್ರಕಲಾ ಮತ್ತಿತರರು ಈ ಸಂದರ್ಭ ಹಾಜರಿದ್ದರು.
ಶಾಂತಿ ಕಾಪಾಡಲು ಮನವಿ: ಕೊಡಗು ಶಾಂತಿ ಸಹಬಾಳ್ವೆಗೆ ಹೆಸರು ವಾಸಿಯಾಗಿದ್ದು, ಶಾಂತಿ, ಸಹಬಾಳ್ವೆ ನೆಲೆಸಲು ಎಲ್ಲರೂ ಸಹಕರಿಸ ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಮನವಿ ಮಾಡಿದರು. ಯಾರನ್ನೂ ರಕ್ಷಿಸುವುದಿಲ್ಲ
ಸರಕಾರ ಯಾರನ್ನೂ ರಕ್ಷಿಸುವುದಿಲ್ಲ. ದಕ್ಷ ಅಧಿಕಾರಿಯ ಸಾವಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರಕಾರ ನಿಷ್ಪಕ್ಷಪಾತ ತನಿಖೆಗೆ ಅವಕಾಶ ಮಾಡಿಕೊಡಲಿದೆ. ಗಣಪತಿಯವರ ಸಾವು ಸಂಭವಿಸಿದ ಅದೇ ದಿನ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ತಿಳಿಸಿದ ಸಚಿವರು, ಪ್ರಕರಣದಲ್ಲಿ ಯಾರನ್ನೂ ರಕ್ಷಿಸಲು ಮುಂದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರತಿಭಟನೆ, ಲಘು ಲಾಠಿ ಚಾರ್ಜ್
ಆತ್ಮಹತ್ಯೆಗೆ ಶರಣಾಗಿದ್ದ ಎಂ.ಕೆ. ಗಣಪತಿ ಅವರ ಮನೆಗೆ ಭೇಟಿ ನೀಡಲು ಬರುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ಬರುವ ವೇಳೆ ನಗರದ ಗುಡ್ಡೆಹೊಸುರು ರಾಜ್ಯ ಹೆದ್ದಾರಿ ತಡೆದು ಬಿಜೆಪಿಯ ಕಾರ್ಯಕರ್ತರು ಹಾಗೂ ಗ್ರಾಮಸ್ಥರನ್ನು ಪ್ರತಿಭಟನೆ ನಡೆಸಿದರು.
ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾಧ ತಲ್ಲಾಟ ನಡೆದ ಪರಿಣಾಮ ಪೊಲೀಸರು ಲಘು ಲಾಠಿ ಪ್ರವಾಹ ನಡೆಸಿ ಪ್ರತಿಭಟನಾ ಕಾರರನ್ನು ಚದುರಿಸಿದ ಘಟನೆಯೂ ನಡೆಯಿತು.







