30 ರೂ. ಹೆಚ್ಚುವರಿ ವೇತನ ನೀಡಲು ನಿರಾಕರಿಸಿದ ಮಾಲಕನ ಕೊಂದ ಕಾವಲುಗಾರ
ಔರಂಗಾಬಾದ್, ಜು.12: ತಾನು ಬೇಡಿಕೆಯಿರಿಸಿದ್ದ ಹೆಚ್ಚುವರಿ 30 ರೂ. ವೇತನ ನೀಡಲು ನಿರಾಕರಿಸಿದ ಮಾಲಕನನ್ನು ಗುದ್ದಲಿಯಿಂದ ಹೊಡೆದು ಕೊಂದ 20 ವರ್ಷದ ಕಾವಲುಗಾರ ಘಟನೆ ನಡೆದು 10 ದಿನಗಳ ನಂತರ ಮುಂಬೈನಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ.
ಆರೋಪಿಯನ್ನು ನಂದೇಡ್ ಜಿಲ್ಲೆಯ ಗಣೇಶ್ ರಘುನಾಥ್ ಯೆವ್ಲೆ ಎಂದು ಗುರುತಿಸಲಾಗಿದೆ. ಆತ ರಾಮೇಶ್ವರ್ ಶ್ರೀರಾಮ್ ದರಕ್ ಎಂಬ 75 ವರ್ಷದ ವ್ಯಕ್ತಿಯ ಮುಚ್ಚುಗಡೆಯಾಗಿರುವ ಉದ್ಯಮ ಘಟಕದ ಕಾವಲುಗಾರನಾಗಿದ್ದ ಹಾಗೂ ಗಂಟೆಗೆ ಕೇವಲ 20 ರೂ. ವೇತನ ಪಡೆಯುತ್ತಿದ್ದನೆನ್ನಲಾಗಿದೆ. ಹತ್ತು ದಿನಗಳ ಹಿಂದೆ ಕೆಲಸ ಮುಗಿದ ನಂತರ ಮಾಲಕ ವೇತನ ನೀಡಿದಾಗ ಗಣೇಶ್ 30 ರೂ. ಹೆಚ್ಚುವರಿ ವೇತನ ನೀಡುವಂತೆ ಕೇಳಿಕೊಂಡಿದ್ದನೆನ್ನಲಾಗಿದೆ. ಆದರೆ ತನ್ನ ಬೇಡಿಕೆಯನ್ನು ಮಾಲಕ ತಿರಸ್ಕರಿಸಿದಾಗ ಆತನನ್ನು ಕೊಲೆಗೈದು ದೇಹವನ್ನು ಅಲ್ಲಿಯೇ ಅಡಗಿಸಿಟ್ಟು ಆತ ಮುಂಬೈಗೆ ಹೋಗಿದ್ದನೆನ್ನಲಾಗಿದೆ.
ಆತ ನೀಡಿದ ಮಾಹಿತಿಯಂತೆ ಶ್ರೀರಾಮ್‌ನ ಉದ್ದಿಮೆಯಿರುವ ಸ್ಥಳಕ್ಕೆ ಹೋದಾಗ ಅಲ್ಲಿ ಆತನ ಕೊಳೆತ ಶವ ಪತ್ತೆ ಹಚ್ಚಲಾಗಿತ್ತು.
ಗಣೇಶ್ ಮದ್ಯ ಸೇವಿಸುವ ಸಲುವಾಗಿ ಹೆಚ್ಚುವರಿ ವೇತನಕ್ಕೆ ಬೇಡಿಕೆ ಸಲ್ಲಿಸಿದ್ದನೆಂದು ತಿಳಿದು ಬಂದಿದೆ.
ಆತನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು 10 ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.