ಮತ್ತೊಂದು ಪ್ರವಾಹವನ್ನು ಆಹ್ವಾನಿಸುತ್ತಿರುವ ಚೆನ್ನೈ
ಚೆನ್ನೈ, ಜು.12: ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಅಭೂತಪೂರ್ವ ಪ್ರವಾಹಕ್ಕೆ ತುತ್ತಾಗಿ ಭಾರೀ ಸಂಕಷ್ಟಕ್ಕೀಡಾಗಿದ್ದ ಚೆನ್ನೈ ನಗರ ಮತ್ತೊಮ್ಮೆ ಇಂತಹುದೇ ಸಮಸ್ಯೆಯ ಪುನರಾವರ್ತನೆಯನ್ನು ಆಹ್ವಾನಿಸುತ್ತಿದೆಯೇ? ಇತ್ತೀಚೆಗಿನ ಬೆಳವಣಿಗೆಗಳನ್ನು ಗಮನಿಸಿದರೆ ಖಂಡಿತಾ ಹೌದು, ಎಂಬ ಉತ್ತರವನ್ನೇ ನೀಡಬೇಕಾಗುತ್ತದೆ. ನೀರಿನ ಮೂಲಗಳ ಮೇಲೆಯೇ ಕಟ್ಟಡಗಳನ್ನು ನಿರ್ಮಿಸಿರುವುದೇ ಕಳೆದ ವರ್ಷದ ಪ್ರವಾಹ ಪರಿಸ್ಥಿತಿಗೆ ಕಾರಣವೆನ್ನುವುದು ನಿರ್ವಿವಾದ. ಆದರೂ ಸಂಬಂಧಿತ ಪ್ರಾಧಿಕಾರಗಳು ಇನ್ನೂ ಪಾಠ ಕಲಿತಿಲ್ಲವೆಂದೇ ಹೇಳಬೇಕು.
ಸರಕಾರವೀಗ ಶೋಲಿಂಗನಲ್ಲೂರಿನಲ್ಲಿರುವ ಜವುಗು ಭೂಮಿಯಲ್ಲಿ ಕಟ್ಟಡ ನಿರ್ಮಿಸಲು ಅನುಕೂಲವಾಗಲು ಮಣ್ಣು ತುಂಬಿಸುತ್ತಿದೆಯೆಂದು ಇಂಜಂಬಕ್ಕಮ್ ಪ್ರದೇಶದಲ್ಲಿ ಬೀಚ್ ಜಾಗವನ್ನು ಭೂ ಮಾಫಿಯಾ ಕೆಲ ಪ್ರಭಾವಶಾಲಿ ರಾಜಕಾರಣಿಗಳ ಜೊತೆ ಸೇರಿ ಆಕ್ರಮಿಸಲು ಪ್ರಯತ್ನಿಸುತ್ತಿರುವುದರ ವಿರುದ್ಧ ಕಾನೂನು ಹೋರಾಟ ಕೈಗೆತ್ತಿಕೊಂಡಿರುವ ಚೆನ್ನೈ ಮೂಲದ ಪರಿಸರವಾದಿ ಐ.ಎಚ್.ಶೇಖರ್ ಆರೋಪಿಸಿದ್ದಾರೆ.
ಪ್ರಕರಣ ನ್ಯಾಯಾಲಯದ ಮುಂದಿರುವ ಹೊರತಾಗಿಯೂ ಸರಕಾರ ಭೂಮಿಯಲ್ಲಿ ಮಣ್ಣು ತುಂಬಿಸಲು ಜುಲೈ ಒಂದರಿಂದ ಆರಂಭಿಸಿದೆಯೆಂದು ಅವರು ಹೇಳಿದ್ದಾರೆ.
‘‘ಈ ಭೂಮಿ ಮೀನುಗಾರಿಕಾ ಗ್ರಾಮವೊಂದಕ್ಕೆ ಸೇರಿದೆ. ಇಲ್ಲಿನ ಭೂ ಆಕ್ರಮಣವನ್ನು ಕಳೆದ ಮೂರು ವರ್ಷಗಳಿಂದ ತಡೆಯಲು ನಾವು ಪ್ರಯತ್ನಿಸಿದ್ದೇವೆ. ಈಗ ಒಮ್ಮೆಲೇ ಭೂಮಿಗೆ ಮಣ್ಣು ತುಂಬಿಸುವ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ’’ ಎಂದು ಅವರು ಹೇಳಿದ್ದಾರೆ.
ಪ್ರಕರಣವನ್ನು ಹಿಂದೆಗೆದುಕೊಳ್ಳುವಂತೆ ತನಗೆ ಬೆದರಿಕೆ ಕರೆಗಳು ಬಂದಿವೆಯೆಂದೂ ಅವರು ಆರೋಪಿಸಿದ್ದಾರೆ. ಚೆನ್ನೈ ನಿವಾಸಿಗರು ಕಳೆದ ವರ್ಷದ ಭಾರೀ ಪ್ರವಾಹ ಪರಿಸ್ಥಿತಿಯಲ್ಲಿ ತಾವು ಅನುಭವಿಸಿದ ಕಷ್ಟವನ್ನು ಮರೆತಿದ್ದಾರೇನು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.







