ಮತ್ತಷ್ಟು ಕುಟುಂಬಗಳು ಬಲಿಯಾಗುವ ಮೊದಲು ಎಚ್ಚೆತ್ತುಕೊಳ್ಳಿ: ಎಚ್‌ಡಿಕೆ ಮನವಿ

ಬೆಂಗಳೂರು, ಜು. 12: ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ರಾಜ್ಯದ ಕ್ರೂರ ವ್ಯವಸ್ಥೆಗೆ ಬಲಿಯಾಗಿದ್ದು, ಆತನ ಕುಟುಂಬ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದೆ ಸಂಕಷ್ಟದ ಸ್ಥಿತಿಯಲ್ಲಿದೆ. ಮತ್ತಷ್ಟು ಕುಟುಂಬಗಳು ಬಲಿಯಾಗುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರಕಾರಕ್ಕೆ ವಿನಮ್ರವಾಗಿ ಮನವಿ ಮಾಡಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿ ಸಾರ್ವಜನಿಕ ಮಹತ್ವದ ಜರೂರು ವಿಷಯದ ಬಗ್ಗೆ ಅಲ್ಪಾವಧಿ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿರುವ ಕಲ್ಲಪ್ಪ ನಿಜಕ್ಕೂ ಭ್ರಷ್ಟನೇ ಆಗಿದ್ದರೆ, ಆತ ಕೇವಲ ಎರಡೇ ಟೀ ಶರ್ಟ್‌ಗಳಲ್ಲಿ ಜೀವನ ನಡೆಸುತ್ತಿರಲಿಲ್ಲ ಎಂದು ಕಲ್ಲಪ್ಪನ ನಿಜ ಜೀವನವನ್ನು ಬಿಚ್ಚಿಟ್ಟರು.
ನೆರವಿಗೆ ಮನವಿ: ತಾನು ಮೃತ ಕಲ್ಲಪ್ಪ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬದ ಸ್ಥಿತಿ ಕಂಡು ಮರುಗಿದ್ದೇನೆ. ಅದೊಂದು ಜನತಾ ಮನೆ, ಸಣ್ಣ ಗುಡಿಸಲು ಕೂರಲಿಕ್ಕೂ ಅಲ್ಲಿ ಜಾಗವಿಲ್ಲ. ಕಲ್ಲಪ್ಪನ ಆತ್ಮಹತ್ಯೆಯಿಂದ ವಿಧವೆಯಾಗಿರುವ ಆ ಹೆಣ್ಣು ಮಗಳು ಚಿಕ್ಕ ವಯಸ್ಸಿನವಳು. ಒಂದೂವರೆ ವರ್ಷದ ಮಗುವಿದೆ. ಆತನ ತಂದೆ ಬಸಪ್ಪ ಪುತ್ರನ ಆತ್ಮಹತ್ಯೆಯನ್ನು ಸಹಿಸಿಕೊಳ್ಳಲು ಆಗದೆ ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ. ಇಂತಹ ಕುಟುಂಬಕ್ಕೆ ರಾಜ್ಯ ಸರಕಾರ ಅಗತ್ಯ ನೆರವು ನೀಡಬೇಕು ಎಂದು ಮನವಿ ಮಾಡಿದರು.
ಆಡಳಿತಸ್ಥರ ನಡವಳಿಕೆಯಿಂದಲೇ ಅಮಾಯಕ ಅಧಿಕಾರಿ ಬಲಿಯಾಗಿದ್ದು, ಆತನ ಮೇಲೆ 10ಲಕ್ಷ ರೂ.ಲಂಚದ ಆರೋಪ ಹೊರಿಸಲಾಗಿದೆ. ಸಿಐಡಿ ಅಧಿಕಾರಿಗಳು ಅವರ ಮನೆಗೆ ತೆರಳಿ ಎಲ್ಲವನ್ನೂ ಜಾಲಾಡಿದ್ದಾರೆ. ಮನೆಯ ಮೇಲಿನ ನೀರಿನ ಟ್ಯಾಂಕ್ ಅನ್ನು ಬಿಡದೆ ಅಲ್ಲಿಯೂ ಹುಡುಕಾಡಿದ್ದಾರೆ.
ವರ್ಗಾವಣೆ ದಂಧೆಯ ಬಗ್ಗೆ ತಾನಿಲ್ಲಿ ಪ್ರಸ್ತಾಪ ಮಾಡುವು ದಿಲ್ಲ. ಪ್ರಾಮಾಣಿಕ ಅಧಿಕಾರಿಗಳನ್ನು ನಿಮ್ಮ ದುಡ್ಡಿಗಾಗಿ ಬಲಿ ಕೊಡ ಬೇಡಿ. ಸಂಕಷ್ಟದಲ್ಲಿರುವವರನ್ನು ಮತ್ತಷ್ಟು ಕಷ್ಟಕ್ಕೆ ದೂಡದೆ ಅವರಿಗೆ ಸಹಕಾರ ನೀಡಿ, ಇಲ್ಲದೆ ಹೋದರೆ ಜನತೆ ನಿಮ್ಮನ್ನು ಎಂದಿ ಗೂ ಕ್ಷಮಿಸುವುದಿಲ್ಲ ಎಂದು ಕುಮಾರಸ್ವಾಮಿ ಬೇಡಿಕೊಂಡರು.





