ಅಡಿಕೆ, ಮೆಣಸು ಬೆಳೆಗೆ ವಿಮೆ ಕಡ್ಡಾಯ

ರಾಜ್ಯ, ಕೇಂದ್ರ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಜು.12: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅಡಿಕೆ ಮತ್ತು ಮೆಣಸು ಬೆಳೆಗೆ ವಿಮೆ ಮಾಡಿಸುವುದು ಕಡ್ಡಾಯಗೊಳಿಸಿರುವ ಪ್ರಕರಣದ ಸಂಬಂಧ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ತದಿ ತೋಟಗಾರ್ ರೂರಲ್ ಕೋ-ಆಪರೇಟಿವ್, ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ ಸೇರಿದಂತೆ ಸುಮಾರು 40 ಮಂದಿ ಅಡಿಕೆ ಮತ್ತು ಮೆಣಸು ಬೆಳೆಗಾರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾಯಮೂರ್ತಿ ರವಿ ಮಳೀಮಠ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿತು.
ಕೇಂದ್ರ ಸರಕಾರವು ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಅಡಿಕೆ ಮತ್ತು ಮೆಣಸು ಬೆಳೆಗಳಿಗೆೆ ವಿಮೆ ಮಾಡಿಸುವುದು ಕಡ್ಡಾಯಗೊಳಿಸಲಾಗಿದೆ. ಈ ಕ್ರಮ ಸರಿಯಲ್ಲ. ಅಡಿಕೆ ಬೆಳೆಗಾರರು ತಮಗೆ ಆವಶ್ಯಕತೆಯಿದ್ದರೆ ಮಾತ್ರ ಅಡಿಕೆ ವಿಮೆ ಮಾಡಿಸುತ್ತಾರೆ. ಅಗತ್ಯವಿಲ್ಲ ಎಂದಾದರೆ ವಿಮೆ ಮಾಡಿಸುವುದಿಲ್ಲ. ಹೀಗಾಗಿ, ವಿಮೆ ಮಾಡಿಸುವುದು ಕಡ್ಡಾಯವಾಗಿಸದೆ ಕೇವಲ ಆಯ್ಕೆಯಾಗಿ ಇರಿಸಬೇಕು. ಹೀಗಾಗಿ, ವಿಮೆ ಮಾಡಿಸುವುದನ್ನು ಕಡ್ಡಾಯಗೊಳಿಸಿ ಈಚೆಗೆ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.





