ವಿಂಡೀಸ್‌ನ ವೇಗದ ಬೌಲರ್ ಟೇಲರ್ ಟೆಸ್ಟ್‌ಗೆ ನಿವೃತ್ತಿ

ಜಮೈಕಾ, ಜು.12: ವೆಸ್ಟ್‌ಇಂಡೀಸ್‌ನ ಹಿರಿಯ ವೇಗದ ಬೌಲರ್ ಜೆರೊಮ್ ಟೇಲರ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಆದರೆ, ಟ್ವೆಂಟಿ-20 ಹಾಗೂ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಲಭ್ಯವಿರಲಿದ್ದಾರೆ.
ಭಾರತ ವಿರುದ್ಧ ಸರಣಿಗೆ ಆಯ್ಕೆಗಾರರು ಟೆಸ್ಟ್ ತಂಡವನ್ನು ಪ್ರಕಟಿಸುವ ಮೊದಲು ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿಯು ಟೇಲರ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಬಗ್ಗೆ ಮಾಹಿತಿ ನೀಡಿತು. ಟೇಲರ್ 13 ವರ್ಷಗಳ ವೃತ್ತಿಬದುಕಿನಲ್ಲಿ ವಿಂಡೀಸ್‌ನ ಪರ 46 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 130 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
ಜಮೈಕಾದ ಬಲಗೈ ವೇಗದ ಬೌಲರ್ ಟೇಲರ್ ಭಾರತದಲ್ಲಿ ಜನಪ್ರಿಯ ಆಟಗಾರನಾಗಿದ್ದಾರೆ. ಅವರು ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್, ಮುಂಬೈ ಇಂಡಿಯನ್ಸ್ ಹಾಗೂ ಪುಣೆ ವಾರಿಯರ್ಸ್ ತಂಡಗಳಲ್ಲಿ ಆಡಿದ್ದಾರೆ.
ಟೇಲರ್ 2003ರ ಜೂನ್‌ನಲ್ಲಿ ಶ್ರೀಲಂಕಾದ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದರು. ಈ ವರ್ಷದ ಜನವರಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಸಿಡ್ನಿಯಲ್ಲಿ ಕೊನೆಯ ಪಂದ್ಯ ಆಡಿದ್ದರು. ಟೇಲರ್ 2015ರಲ್ಲಿ ಆಸ್ಟ್ರೇಲಿಯದ ವಿರುದ್ಧ ಇನಿಂಗ್ಸ್‌ವೊಂದರಲ್ಲಿ ಜೀವನಶ್ರೇಷ್ಠ(47 ರನ್‌ಗೆ 6 ವಿಕೆಟ್)ಬೌಲಿಂಗ್ ಮಾಡಿದ್ದರು. 2006ರಲ್ಲಿ ಭಾರತದ ವಿರುದ್ಧ 95 ರನ್‌ಗೆ 9 ವಿಕೆಟ್ ಕಬಳಿಸಿರುವುದು ಶ್ರೇಷ್ಠ ಸಾಧನೆಯಾಗಿದೆ.
ವಿಶೇಷವೆಂದರೆ, ಟೇಲರ್ ಕೆಳ ಕ್ರಮಾಂಕದಲ್ಲೂ ಉತ್ತಮ ಬ್ಯಾಟ್ಸ್‌ಮನ್ ಆಗಿದ್ದರು. 10ನೆ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಿದ್ದ ಅವರು ತಲಾ ಒಂದು ಶತಕ ಹಾಗೂ ಅರ್ಧಶತಕ ಬಾರಿಸಿದ್ದಾರೆ. ನ್ಯೂಝಿಲೆಂಡ್ ವಿರುದ್ಧ 2008ರಲ್ಲಿ 106 ರನ್ ಗಳಿಸಿದ್ದು, ಇದು ಅವರ ವೈಯಕ್ತಿಕ ಗರಿಷ್ಠ ಸ್ಕೋರಾಗಿತ್ತು.
ಟೇಲರ್ ವೃತ್ತಿಜೀವನ ಗಾಯದ ಸಮಸ್ಯೆಯಿಂದ ಪೀಡಿತವಾಗಿತ್ತು. 2009 ಹಾಗೂ 2014ರ ನಡುವೆ ಅವರು ಟೆಸ್ಟ್ ಪಂದ್ಯಗಳನ್ನೇ ಆಡಿರಲಿಲ್ಲ.







