ಭಾರತ ವಿರುದ್ಧ ಟೆಸ್ಟ್ ಸರಣಿಗೆ ವಿಂಡೀಸ್ ತಂಡ ಪ್ರಕಟ
ಹಿರಿಯ ವಿಕೆಟ್‌ಕೀಪರ್ ರಾಮ್ದಿನ್‌ಗೆ ಸ್ಥಾನವಿಲ್ಲ

ಜಮೈಕಾ, ಜು.12: ಭಾರತ ವಿರುದ್ಧ ಗುರುವಾರ ಆ್ಯಂಟಿಗುವಾದಲ್ಲಿ ಆರಂಭವಾಗಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ವೆಸ್ಟ್‌ಇಂಡೀಸ್ ಟೆಸ್ಟ್ ತಂಡವನ್ನು ಪ್ರಕಟಿಸಲಾಗಿದೆ. ಹಿರಿಯ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ರಾಮ್ದಿನ್‌ರನ್ನು ತಂಡದಿಂದ ಕೈಬಿಡಲಾಗಿದ್ದು ರಾಮ್ದಿನ್ ಬದಲಿಗೆ ಶೇನ್ ಡೌರಿಚ್‌ರನ್ನು ಆಯ್ಕೆ ಮಾಡಲಾಗಿದೆ.
‘‘ನನ್ನನ್ನು ತಂಡದಿಂದ ಕೈಬಿಡಲು ನನ್ನ ಬ್ಯಾಟಿಂಗ್ ಸರಾಸರಿ ಕಾರಣ ಎಂದು ಆಯ್ಕೆಗಾರರು ಹೇಳುತ್ತಿದ್ದಾರೆ. ನಾನು 25.87ರ ಸರಾಸರಿಯಲ್ಲಿ 74 ಟೆಸ್ಟ್ ಪಂದ್ಯಗಳಲ್ಲಿ 2,898 ರನ್ ಕಲೆ ಹಾಕಿದ್ದೇನೆ. ವಿಂಡೀಸ್‌ನ ಹೊಸ ಆಯ್ಕೆ ಸಮಿತಿಯ ನೂತನ ಅಧ್ಯಕ್ಷ ಕೋರ್ಟ್ನಿ ಬ್ರೌನ್‌ಗೆ ನನ್ನ ಸರಾಸರಿ ಉತ್ತಮವಾಗಿಲ್ಲ ಎಂದು ಹೇಳುತ್ತಿರುವುದು ನನಗೆ ಅಚ್ಚರಿ ತಂದಿದೆ’’ ಎಂದು ರಾಮ್ದಿನ್ ಟ್ವೀಟ್ ಮಾಡಿದ್ದಾರೆ.
24ರ ಹರೆಯದ ಡೌರಿಚ್ ಕಳೆದ ಋತುವಿನಲ್ಲಿ ಆಸ್ಟ್ರೇಲಿಯ ಪ್ರವಾಸ ಕೈಗೊಂಡಿದ್ದಾಗ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದರು. ರಾಮ್ದಿನ್ ವಿಕೆಟ್‌ಕೀಪಿಂಗ್ ನಡೆಸಿದ್ದರು. ವಿಂಡೀಸ್ ತಂಡ ಪ್ರಕಟಿಸಿರುವ 12 ಸದಸ್ಯರ ತಂಡದಲ್ಲಿ ಹಿರಿಯ ಡೈನಾಮಿಕ್ ಆಟಗಾರರಾದ ಕ್ರಿಸ್ ಗೇಲ್, ಡ್ವೇಯ್ನಿ ಬ್ರಾವೊ, ಡರೆನ್ ಸಮ್ಮಿ ಹಾಗೂ ಕೀರನ್ ಪೊಲಾರ್ಡ್‌ರಿಲ್ಲ. ಇವರೆಲ್ಲರೂ ಟ್ವೆಂಟಿ-20 ಕ್ರಿಕೆಟ್‌ನತ್ತ ಹೆಚ್ಚು ಗಮನ ನೀಡುತ್ತಿದ್ದಾರೆ.
ವೇಗದ ಬೌಲರ್ ಜೆರೊಮ್ ಟೇಲರ್ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಹಿನ್ನೆಲೆಯಲ್ಲಿ ತಂಡದಲ್ಲಿ ಸ್ಥಾನ ಪಡೆದಿಲ್ಲ. ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡ ಟ್ವೆಂಟಿ-20 ಮಾದರಿ ಪಂದ್ಯದಲ್ಲಿ 2012 ಹಾಗೂ 2016ರಲ್ಲಿ ವಿಶ್ವ ಚಾಂಪಿಯನ್ ಆಗಿತ್ತು. ಆದರೆ,ಟೆಸ್ಟ್ ಕ್ರಿಕೆಟ್‌ನಲ್ಲಿನ ಪ್ರದರ್ಶನ ಅತ್ಯಂತ ಕಳಪೆಯಾಗಿದೆ.
ವೇಗದ ಬೌಲರ್ ಜೇಸನ್ ಹೋಲ್ಡರ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಟ್ವೆಂಟಿ-20 ವಿಶ್ವಕಪ್‌ನ ಬ್ಯಾಟಿಂಗ್ ಹೀರೋಗಳಾದ ಮರ್ಲಾನ್ ಸ್ಯಾಮುಯೆಲ್ಸ್ ಹಾಗೂ ಕಾರ್ಲಸ್ ಬ್ರಾತ್‌ವೇಟ್ ತಂಡದಲ್ಲಿದ್ದಾರೆ.
ವೆಸ್ಟ್‌ಇಂಡೀಸ್ ತಂಡ: ಜೇಸನ್ ಹೋಲ್ಡರ್(ನಾಯಕ), ಕ್ರೆಗ್ ಬ್ರಾತ್‌ವೇಟ್, ದೇವೇಂದ್ರ ಬಿಶೂ, ಜೆರ್ಮೈನ್ ಬ್ಲಾಕ್‌ವುಡ್, ಕಾರ್ಲಸ್ ಬ್ರಾತ್‌ವೇಟ್, ಡರೆನ್ ಬ್ರಾವೊ, ರಾಜೇಂದ್ರ ಚಂದ್ರಿಕ, ರಾಸ್ಟನ್ ಚೇಸ್, ಶೇನ್ ಡೌರಿಚ್, ಶಾನೊನ್ ಗಾಬ್ರೈಲ್, ಲಿಯೊನ್ ಜಾನ್ಸನ್ ಹಾಗೂ ಮರ್ಲಾನ್ ಸ್ಯಾಮುಯೆಲ್ಸ್.







