ಈಗ ಲಕ್ಷಣ ಕಾಣುವ ಮೊದಲೇ ಅಲ್ಜೀಮರ್ಸ್ ಕಾಯಿಲೆ ಪತ್ತೆ ಹಚ್ಚಿ

ವಾಷಿಂಗ್ಟನ್: ಭಾರತೀಯ ಸಂಜಾತ ವಿಜ್ಞಾನಿಯೂ ಇರುವ ಸಂಶೋಧಕರ ತಂಡವೊಂದು ಅಲ್ಜೀಮರ್ ರೋಗದ ಚಿಹ್ನೆಗಳನ್ನು ಅದು ಬೆಳೆಯುವ ಮೊದಲೇ ಪತ್ತೆ ಹಚ್ಚುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಿಂದಾಗಿ ರೋಗವನ್ನು ಆರಂಭದಲ್ಲೇ ಪತ್ತೆ ಹಚ್ಚಲು ಸಾಧ್ಯವಾಗಲಿದೆ.
ಈ ತಂತ್ರಜ್ಞಾನವನ್ನು ಮಾನವನ ಮೇಲೆ ಬಳಸುವ ಪ್ರಾಯೋಗಿಕ ಚಿಕಿತ್ಸೆಗಳು ಇನ್ನೂ ಆರಂಭವಾಗಬೇಕಿದೆ. ಸಂಶೋಧಕರು ಕೋಶಗಳ ಮೇಲಿನ ಹಿಂದಿನ ಅಧ್ಯಯನವನ್ನೇ ಮುಂದುವರಿಸಿ ಇಲಿಯ ರೆಟಿನಾದಲ್ಲಿ ಬದಲಾವಣೆಯನ್ನು ಗುರುತಿಸಿ ಅಲ್ಜೀಮರ್ ಕಾಯಿಲೆಯನ್ನು ಬೆಳೆಯುವ ಮೊದಲೇ ಪತ್ತೆ ಹಚ್ಚಿದ್ದಾರೆ. ರೋಗಿಯಲ್ಲಿ ವಾಸ್ತವದ ನರವ್ಯೂಹದ ಚಿಹ್ನೆಗಳು ಕಾಣುವ ಮೊದಲೇ ಪರಿಣಾಮಕಾರಿ ಚಿಕಿತ್ಸೆಯನ್ನು ಆರಂಭಿಸಲು ಇದರಿಂದ ಸಾಧ್ಯವಾಗಲಿದೆ. ಆದರೆ ಈ ಮೊದಲು ಕಾಯಿಲೆಯನ್ನು ಆರಂಭಿಕ ಘಟ್ಟದಲ್ಲಿ ಪತ್ತೆ ಹಚ್ಚುವ ತಂತ್ರಜ್ಞಾನ ಇಲ್ಲದಿದ್ದ ಕಾರಣ ಔಷಧಿಗಳು ಆರಂಭಿಕ ಹಂತದ ಅಲ್ಜೀಮರ್ ರೋಗಕ್ಕೆ ಚಿಕಿತ್ಸೆ ನೀಡುವುದೇ ಎನ್ನುವುದು ಪರೀಕ್ಷೆಯಾಗಿಲ್ಲ. ಈಗ ಆರಂಭಿಕ ಹಂತದಲ್ಲೇ ರೋಗ ಪತ್ತೆ ಸಾಧ್ಯವಾಗಿರುವ ಕಾರಣ ಅದಕ್ಕಾಗಿ ಔಷಧಿಯನ್ನೂ ಸಿದ್ಧಪಡಿಸಬಹುದು ಎಂದು ಮಿನೆಸೊಟಾ ವಿಶ್ವವಿದ್ಯಾನಿಲಯದ ರಾಬರ್ಟ್ ವಿನ್ಸ್ ಹೇಳಿದ್ದಾರೆ.
ಮೆದುಳನ್ನು ನೋಡಲು ಕಣ್ಣನ್ನು ಪರೀಕ್ಷಿಸುವುದು ಹೊಸ ತಂತ್ರಜ್ಞಾನದ ವಿಶೇಷತೆ. ಕಣ್ಣಿನ ರೆಟಿನಾ ಕೇವಲ ಮೆದುಳಿಗೆ ಸಂಪರ್ಕ ಹೊಂದಿರುವುದು ಮಾತ್ರವಲ್ಲ, ಕೇಂದ್ರೀಯ ನರವ್ಯೂಹ ವ್ಯವಸ್ಥೆಯ ಭಾಗವೂ ಹೌದು. ಇಲಿಗಳಲ್ಲಿ ಪರೀಕ್ಷೆ ನಡೆಸಿದಾಗ ನರವ್ಯೂಹಗಳಲ್ಲಿ ಕಾಯಿಲೆಯ ಚಿಹ್ನೆ ಕಾಣುವ ಮೊದಲೇ ರೆಟಿನಾದಲ್ಲಿ ನಾವು ಅದನ್ನು ಗುರುತಿಸಲು ಸಾಧ್ಯವಾಗಿದೆ ಎಂದು ಯುಎಂಎನ್ ನ ಡ್ರಗ್ ಡಿಸೈನ್ ಕೇಂದ್ರದ ಸಂಶೋಧಕಿ ಸ್ವಾತಿ ಮೋರೆ ಹೇಳಿದ್ದಾರೆ. ಅಲ್ಜೀಮರ್ ಕಾಯಿಲೆಯಿಂದ ಮೆದುಳು ಮತ್ತು ರೆಟಿನಾ ಎರಡರಲ್ಲೂ ಬದಲಾವಣೆಯಾಗುತ್ತದೆ. ಮೆದುಳಿನಂತಲ್ಲದೆ ರೆಟಿನಾ ಬೇಗನೇ ಪರೀಕ್ಷೆಗೆ ಲಭ್ಯವಿರುತ್ತದೆ. ರೆಟಿನಾದಲ್ಲಿ ಬದಲಾವಣೆ ಮಾಡುವುದನ್ನು ಅವಲೋಕಿಸುವುದು ಸರಳವಾಗಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಕೃಪೆ: http://www.ndtv.com/







