ಬೆಳ್ತಂಗಡಿ ತಾಲೂಕು ಕಚೇರಿಗೆ ಲೋಕಾಯುಕ್ತ ದಾಳಿ
.jpg)
ಬೆಳ್ತಂಗಡಿ, ಜು.13: ಶಿಬಾಜೆ ಗ್ರಾಮದಲ್ಲಿ ಸರಕಾರಿ ಜಮೀನನ್ನು ಅಕ್ರಮವಾಗಿ ಹಣ ಪಡೆದು ಮಂಜೂರು ಮಾಡಿರುವ ಬಗ್ಗೆ ಬಂದಿರುವ ದೂರಿನ ಹಿನ್ನಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೆಳ್ತಂಗಡಿ ತಾಲೂಕು ಕಚೇರಿಗೆ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿದರು.
ಜಮೀನು ಮಂಜೂರಾತಿಗಾಗಿ ಎನ್‌ಸಿಆರ್ 105/91-92, 107/91-92, 323/91-92, 109/91-92 ಅರ್ಜಿ ಸಲ್ಲಿಸಿದ್ದು ಇದರಲ್ಲಿ ಅರಣ್ಯ ಇಲಾಖೆ ಅಕ್ಷೇಪಣೆಯಿದೆಯೆಂದು ತಿರಸ್ಕರಿಸಲಾಗಿತ್ತು.
ನಂತರ 109/91-92ರಲ್ಲಿ 2.53 ಎಕ್ರೆ ಎಂ.ಬಿ .ಪ್ರೈ. ಲಿಯವರು ಅರ್ಜಿ ಸಲ್ಲಿಸಿದ್ದು ಇದನ್ನು ತಹಶೀಲ್ದಾರ್ ಮತ್ತು ಇತರ ಸಿಬ್ಬಂದಿ ಸೇರಿ ಲಂಚ ಪಡೆದು ಕಡತ ತಿದ್ದುಪಡಿ ಮಾಡಿ ಮಂಜೂರಾತಿ ಮಾಡಿದ್ದಾರೆ ಎಂದು ಆರೋಪಿಸಿ ಕುರಿಯನ್ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದು ಇದರಂತೆ ಲೋಕಾಯುಕ್ತ ಇನ್ಸ್ಪೆಕ್ಟರ್ ವಿನಯಪ್ರಸಾದ್ ನೇತೃತ್ವದ ತಂಡ ಬುಧವಾರ ತಾಲೂಕು ಕಚೇರಿಯಲ್ಲಿ ಕಡತ ಪರಿಶೀಲನೆ ನಡೆಸಿತು.
ಕಡತ ತಿದ್ದುಪಡಿ ಆರೋಪಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಪುಟ್ಟಶೆಟ್ಟಿ, ಉಪತಹಶೀಲ್ದಾರ್ ಲಿಂಗಯ್ಯ, ಸೆಕ್ಷನ್ ಕ್ಲರ್ಕ್ ಗೋವಿಂದ ನ್‌ಕಾ, ಅರ್ಜಿದಾರ ಎಂ.ಬಿ. ಪ್ರೈ.ಲಿ ಯವರ ಮೇಲೆ ಲೋಕಾಯುಕ್ತ ಪ್ರಕರಣ ದಾಖಲಿಸಿದ್ದು ಕಡತಗಳ ಪರಿಶೀಲನೆ ನಂತರ ಆರೋಪ ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಇನ್ಸ್ಪೆಕ್ಟರ್ ವಿನಯಪ್ರಸಾದ್ ತಿಳಿಸಿದರು.
ಪರಿಶೀಲನೆಯಲ್ಲಿ ಸಿಬ್ಬಂದಿಯಾದ ಪ್ರವೀಣ್, ಸಲಿಂ, ಗಿರೀಶ್, ನವೀನ್ ಭಾಗವಹಿಸಿದ್ದರು.







