ಸಲ್ಮಾನ್ ಅನ್ನು ಮೀರಿಸಿದ ‘ಸುಲ್ತಾನ್ ಹೃತಿಕ್ ರೋಶನ್’ 550 ಕೋಟಿ ಡೀಲ್

ಮುಂಬೈ, ಬರೋಬ್ಬರಿ ರೂ 550 ಕೋಟಿ !. ಹೌದು ಈ ಭಾರೀ ಮೊತ್ತವನ್ನು ಬಾಲಿವುಡ್ ನಟ ಹೃತಿಕ್ ರೋಶನ್ ಜನವರಿ, 2017ರಲ್ಲಿ ಬಿಡುಗಡೆಯಾಗುವ ಕಾಬಿಲ್ ಚಿತ್ರದಿಂದ ಹಿಡಿದು ಆ ವರ್ಷದ ಎಲ್ಲಾ ಚಿತ್ರಗಳ ಸ್ಯಾಟಲೈಟ್ ಹಕ್ಕುಗಳನ್ನು ಟಿವಿ ವಾಹಿನಿಯೊಂದರೊಂದಿಗೆ ಡೀಲ್‌ಗೆ ಸಹಿ ಹಾಕಿ ಪಡೆದಿದ್ದಾರೆಂದು ತಿಳಿಯಲಾಗಿದೆಯೆಂದು ಎಫ್ ಎಂಟರ್‌ಟೈನ್‌ಮೆಂಟ್ ವರದಿಯೊಂದು ತಿಳಿಸಿದೆ.
ಅಂದ ಹಾಗೆ, ಈ ಡೀಲ್ ಸ್ಟಾರ್ ನೆಟ್‌ವರ್ಕ್ ನೊಂದಿಗೆ ಸಲ್ಮಾನ್ ಖಾನ್ 2014 ರಿಂದ 2019 ರ ನಡುವೆ ಬಿಡುಗಡೆಯಾಗಲಿರುವ ತಮ್ಮೆಲ್ಲಾ ಚಿತ್ರಗಳ ಸ್ಯಾಟಲೈಟ್ ಹಕ್ಕುಗಳನ್ನು 500 ಕೋಟಿ ರೂ.ಗೆ ಮಾರಾಟ ಮಾಡಿದ ಒಪ್ಪಂದದ ದಾಖಲೆಯನ್ನು ಮುರಿದೇ ಬಿಟ್ಟಿದೆ.
ಅತ್ತ ವರುಣ್ ಧವನ್ ಕೂಡ ತಮ್ಮ ಜಡ್ವಾ 2 ಹೊರತು ಪಡಿಸಿ 2017 ರ ಎಲ್ಲಾ ಚಿತ್ರಗಳ ಸ್ಯಾಟಲೈಟ್ ಹಕ್ಕುಗಳನ್ನು 300 ಕೋಟಿ ರೂ.ಗೆ ಡೀಲ್ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಈ ಹಿಂದೆ ಕೂಡ ಟಿವಿ ನೆಟ್‌ವರ್ಕ್‌ಗಳು ತಾವು ನಡೆಸಿದ ಸ್ಯಾಟಲೈಟ್ ಡೀಲ್ ಗಳ ಬಗ್ಗೆ ಹೇಳಿಕೊಂಡಿವೆಯಾದರೂ ಸಲ್ಮಾನ್ ಖಾನ್ ಜತೆ ಸಹಿ ಹಾಕಲಾದ ಒಪ್ಪಂದಕ್ಕೆ ನೀಡಬೇಕಾಗಿದ್ದ 500 ಕೋಟಿ ರೂ. ಮೊತ್ತ ಹಲವರ ಹುಬ್ಬೇರಿಸಿತ್ತೆನ್ನುವುದು ನಿಜ. ಈ ಒಪ್ಪಂದದಿಂದ ಸ್ಟಾರ್ ನೆಟ್‌ವರ್ಕ್ ಕೂಡ ಸಾಕಷ್ಟು ಲಾಭ ಪಡೆಯಿತು. ಕಳೆದ ವರ್ಷ ಭಜರಂಗಿ ಭಾಯಿಜಾನ್ ಹಾಗೂ ಪ್ರೇಮ್ ರತನ್ ಧನ್ ಪಾಯೋ ಚಿತ್ರಗಳ ಪ್ರಸಾರ ಮಾಡಿ ಈ ವಾಹಿನಿ ತನ್ನ ಟಿಆರ್‌ಪಿ ರೇಟಿಂಗನ್ನು ಬಹಳಷ್ಟು ಉತ್ತಮ ಪಡಿಸಿಕೊಂಡಿದೆ.
ಸ್ಟಾರ್ ಇಂಡಿಯಾ ಅಜಯ್ ದೇವಗನ್ ಅವರ ಸಿಂಗಂ ಹಾಗೂ ಗೋಲ್ ಮಾಲ್ ಫ್ರಾಂಚೈಸ್ ಸಹಿತ ಹಲವು ಹಳೆಯ ಹಾಗೂ ಹೊಸ ಚಿತ್ರಗಳನ್ನು ಪ್ರಸಾರ ಮಾಡುವ ಹಕ್ಕು ಪಡೆಯಲು 400 ಕೋಟಿ ರೂ. ಡೀಲ್‌ಗೆ ಸಹಿ ಹಾಕಿತ್ತು. ಆದರೆ ಇತ್ತೀಚೆಗಿನ ಹೃತಿಕ್ ಜತೆಗಿನ ಡೀಲ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವಾಗಿದೆ.
ಅತ್ತ ಶಾರುಖ್ ಖಾನ್ ಅವರ ದಿಲ್ವಾಲೆ ಚಿತ್ರ ಪ್ರಸಾರದ ಸ್ಯಾಟಲೈಟ್ ಹಕ್ಕಿಗಾಗಿ 60 ಕೋಟಿ ರೂ. ಪಾವತಿಸಲಾಗಿದೆಯೆನ್ನಲಾಗಿದ್ದು, ಬ್ಲಾಕ್ ಬಸ್ಟರ್ ಚಿತ್ರ ಬಾಹುಬಲಿಯ ಹಿಂದಿ ಅವತರಣಿಕೆಯು 20 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಸ್ಯಾಟಲೈಟ್ ಹಕ್ಕು ಮಾರಾಟ ಮಾಡುವ ಮೂಲಕ ಪಡೆದಿತ್ತೆನ್ನಲಾಗಿದೆ.
ಆದರೆ ಮಾಧ್ಯಮಗಳಲ್ಲಿ ಚಿತ್ರಗಳ ಸ್ಯಾಟಲೈಟ್ ಹಕ್ಕು ಮಾರಾಟ ಮೊತ್ತಕ್ಕೆ ಸಂಬಂಧಿಸಿದ ವರದಿಗಳು ಕೇವಲ ಊಹಾತ್ಮಕವೆಂದು ಸ್ಟಾರ್ ಇಂಡಿಯಾ ಮುಖ್ಯಸ್ಥ ಸಂಜಯ್ ಗುಪ್ತಾ ಹೇಳುತ್ತಾರೆ.







