ಮಗಳ ಹುಟ್ಟುಹಬ್ಬದಂದೇ ಪತ್ನಿಯನ್ನು ಕೊಂದ ಪತಿ

ಲಕ್ನೊ,ಜುಲೈ 13: ಇಲ್ಲಿನ ರಾಜಾಜಿಪುರಂನಲ್ಲಿ ಧನಪಿಶಾಚಿ ಪತಿಮಹಾಶಯನೊಬ್ಬ ತನ್ನ ಎರಡು ವರ್ಷದ ಮಗುವಿನ ಹುಟ್ಟುಹಬ್ಬದಂದೇ ಕುಟುಂಬ ಸದಸ್ಯರೊಂದಿಗೆ ಸೇರಿ ಪತ್ನಿಯನ್ನು ಮಾರಣಾಂತಿಕ ವಾಗಿ ಥಳಿಸಿದ್ದು ನಂತರ ಆಕೆ ಮೃತಪಟ್ಟ ಘಟನೆ ವರದಿಯಾಗಿದೆ. ಖಾಸಗಿ ಪೈನಾನ್ಸ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾದ ವಿನೀಶ್ ಎಂಬಾತನ ಪತ್ನಿ ಗುಂಜನ್ ದಾರುಣವಾಗಿ ಮೃತಳಾದ ಗೃಹಿಣಿಯಾಗಿದ್ದಾರೆ. ಮಂಗಳವಾರ ಮಧ್ಯಾಹ್ನವೇಳೆ ತನ್ನ ಪುತ್ರಿ ಶುಭಳ ಎರಡನೆ ಜನ್ಮದಿನದ ತಯಾರಿ ನಡೆಸುತ್ತಿದ್ದ ಗುಂಜನ್‌ಳ ಮೇಲೆ ಹಲ್ಲೆಯೆಸಗಿ ಪತಿ ವಿನೀಶ್ ಕೊಂದು ಹಾಕಿದ್ದಾನೆ. ಹೀಗೆ ಮಗಳ ಜನ್ಮದಿನದಂದು ಸಂಭ್ರಮಿಸಬೇಕಾಗಿದ್ದ ಗ್ರಹಿಣಿಯೊಬ್ಬರು ಧನಪಿಶಾಚಿ ಪತಿಯಿಂದಾಗಿ ದಾರುಣವಾಗಿ ಜೀವಕಳಕೊಳ್ಳಬೇಕಾಯಿತು. ತನಗೆ ಪತಿ ನೀಡುತ್ತಿದ್ದ ಹಿಂಸೆಯನ್ನು ಗುಂಜನ್ ತನ್ನಸಹೋದರಿಗೆ ಫೋನ್ ಮಾಡಿ ತಿಳಿಸಿದ್ದಳು. ಗುಂಜನ್‌ಗೆ ಹೊಡೆದ ಸುದ್ದಿ ತಿಳಿದು ಅವಳ ಸಹೋದರಿ ತವರಿಗೆ ಫೋನ್ ಮಾಡಿತಿಳಿಸಿದ್ದರು. ತವರಿನವರು ಗುಂಜನ್‌ಗೆ ಫೋನ್ ಮಾಡಿದಾಗ ಆಕೆ ಫೋನ್ ಎತ್ತಿರಲಿಲ್ಲ. ತವರು ಮನೆಯವರು ಗುಂಜನ್‌ಳನ್ನು ಹುಡುಕುತ್ತಾ ಅವಳ ಪತಿ ಮನೆಗೆ ಬಂದಾಗ ಗುಂಜನ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನೂ ಉಸಿರಾಟ ಇದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿ ವಿನೀಶ್ ಗುಂಜನ್‌ಳ ಮೃತದೇಹವನ್ನು ಕಾರಿನಲ್ಲಿ ಹಾಕಿಕೊಂಡು ಹೊರಟು ಹೋಗಿದ್ದ. ಗುಂಜನ್‌ಳ ತವರು ಮನೆಯವರು ಸ್ಥಳೀಯ ಆಸ್ಪತ್ರೆಗಳಲೆಲ್ಲ ಹುಡುಕಾಡಿದಾಗ ವಿನೀಶ್ ಎಲ್ಲಿಯೂ ಪತ್ತೆಯಿರಲಿಲ್ಲ. ಫೋನ್ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಕೊನೆಗೂ ಫೋನ್ ಕರೆ ಸ್ವೀಕರಿಸಿ ಗುಂಜನ್ ಮೃತಳಾಗಿದ್ದಾಳೆ. ಅವಳ ಶವ ಮೋರ್ಚರಿಯಲ್ಲಿದೆ ಎಂದು ಆತ ಹೇಳಿದ್ದಾನೆ. ಕೂಡಲೇ ಗುಂಜನ್‌ಳ ತವರು ಮನೆಯವರು ಮೋರ್ಚರಿಗೆ ಹೋಗಿ ನೋಡಿದಾಗ ಅವಳ ಮೃತ ಶರೀರವಿಡೀ ಗಾಯಗಳಿದ್ದವು..
ಇದಕ್ಕಿಂತ ಮೊದಲು ಒಮ್ಮೆ ವಿನೀಶ್ ಎರಡು ಲಕ್ಷ ರೂಪಾಯಿ ವರದಕ್ಷಿಣೆಗಾಗಿ ಹಿಂಸೆಕೊಟ್ಟು ಪತ್ನಿಯನ್ನು ತವರು ಮನೆಗೆ ಅಟ್ಟಿದ್ದ ಎಂದು ಗುಂಜನ್‌ಳ ಸಹೋದರ ವಿವೇಕ್ ಹೇಳಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಹಣವನ್ನು ಆತನಿಗೆ ಕೊಟ್ಟ ನಂತರ ಪತ್ನಿಯನ್ನು ಆತ ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಪುನಃ ವರದಕ್ಷಿಣೆಗಾಗಿ ಹಿಂಸೆ ನೀಡಲು ಆರಂಭಿಸಿದ್ದಾರೆಂದು ಗುಂಜನ್ ಸಹೋದರಿಗೆ ಫೋನ್ ಮಾಡಿ ತಿಳಿಸಿದ್ದಳು. ಗುಂಜನ್‌ಳ ಪತಿ ವಿನೀಶ್, ಆತನ ತಂದೆ ಹಿಮಾಂಶು ನಿಗಮ್ ಮತ್ತು ಸಹೋದರಿ ಶ್ವೇತರ ವಿರುದ್ಧ ವರದಕ್ಷಿಣೆ ಹತ್ಯೆ ದೂರನ್ನು ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.







