ಈ 57 ಲಕ್ಷ ಮಕ್ಕಳು ಮಾಡಿದ ತಪ್ಪೇನು?
5 ವರ್ಷದ ಪೋರ ಗಣಿಯಲ್ಲಿ ದುಡಿಯುವ ದೇಶ ನಮ್ಮದು

ಪರ್ವತ ಪ್ರದೇಶಗಳು ಮತ್ತು ಜಲಪಾತಗಳಿಂದ ಕೂಡಿದ ಈಶಾನ್ಯ ರಾಜ್ಯದಲ್ಲಿ ನಿರ್ದೇಶಕ ಚಂದ್ರಶೇಖರ್ ರೆಡ್ಡಿ 2011ರಲ್ಲಿ ತಮ್ಮ ಸಿನೆಮಾಕ್ಕಾಗಿ ಅರಣ್ಯದಲ್ಲಿ ವಿಷಯ ಹುಡುಕುತ್ತಿದ್ದರು. ಬದಲಾಗಿ ಅವರು 5 ವರ್ಷಕ್ಕೂ ಕಡಿಮೆ ಪ್ರಾಯದ ಮಕ್ಕಳು ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುವುದನ್ನು ಕಂಡರು. ಈ ಕ್ರೂರ ದೃಶ್ಯ ನೋಡಿದ ರೆಡ್ಡಿ ಮೇಘಾಲಯದಲ್ಲಿ ಹಲವು ತಿಂಗಳ ಕಾಲ ನೆಲೆಸಿ ಮಕ್ಕಳು ಮತ್ತು ಅವರ ಕುಟುಂಬವನ್ನು ಪರಿಚಯಿಸಿಕೊಂಡರು. ನಿಧಾನವಾಗಿ ಅವರು ಗಣಿಗಳಿಗೂ ಪ್ರವೇಶ ಪಡೆದರು. ಅವುಗಳಲ್ಲಿ ಬಹುತೇಕ ಅಕ್ರಮ ಗಣಿಗಳೇ ಆಗಿದ್ದವು.
ಅಲ್ಲಿ ರೆಡ್ಡಿ ತಮ್ಮ ಮೊದಲ ಸಾಕ್ಷ್ಯಚಿತ್ರಕ್ಕೆ ಸಾಕಷ್ಟು ವಸ್ತುಗಳನ್ನು ಕಲೆ ಹಾಕಿದರು. ಕಳೆದ ವಾರ ಬಿಡುಗಡೆಯಾದ ಫೈರ್‌ಫ್ಲೈಸ್ ಇನ್ ದ ಎಬಿಸ್‌ಎನ್ನುವ ಸಾಕ್ಷ್ಯ ಚಿತ್ರ ಫೆಬ್ರವರಿಯಲ್ಲಿ ನಡೆದ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರವೆಂದು ಪ್ರಶಸ್ತಿ ಪಡೆದಿದೆ. ಜೈನತಿಯಾ ಹಿಲ್ಸ್ ಪ್ರಾಂತದಲ್ಲಿ ಈ ಸಾಕ್ಷ್ಯಚಿತ್ರ ಆರಂಭವಾಗುತ್ತದೆ. ಇಳಿಜಾರು ಪ್ರದೇಶದಲ್ಲಿ ಇಲಿಗಳ ತೂತಿನಂತಿರುವ ಏಣಿಗಳಲ್ಲಿ ನುಗ್ಗಿ ಯುವ ಬಾಲಕರು ಕೆಲಸ ಮಾಡುವುದನ್ನು ಅವರು ತೋರಿಸಿದ್ದರು. ಕೇವಲ ಪಿಕಾಸು ಮತ್ತು ಫ್ಲಾಶ್ ಲೈಟ್ ಬಳಸಿ ಗಟ್ಟಿಯಾದ ಕಲ್ಲನ್ನು ಗುದ್ದಿ ಕಲ್ಲಿದ್ದಲು ತೆಗೆಯುತ್ತಿದ್ದರು ಬಾಲಕರು. ಮಕ್ಕಳು ಗಣಿಗಳಲ್ಲಿ ಕೆಲಸ ಮಾಡುವುದು ನನಗೆ ಆಘಾತಕಾರಿಯಾಗಿತ್ತು. ರಾಜ್ಯ, ಕಾನೂನು, ಪೊಲೀಸರು, ಕುಟುಂಬಗಳು ಮತ್ತು ಸಂಬಂಧಗಳ ಬಗ್ಗೆ ನನಗೆ ಈಗಾಗಲೇ ಇದ್ದ ಎಲ್ಲಾ ಪೂರ್ವಾಗ್ರಹಗಳು ಹೋದವು. ಅಲ್ಲಿ ಒಂದು ಭಿನ್ನ ಜಗತ್ತೇ ಇತ್ತು ಎನ್ನುತ್ತಾರೆ ರೆಡ್ಡಿ.
ಈ ಸಿನಿಮಾ 11 ವರ್ಷದ ಬಾಲಕ ಸೂರಜ್ ಕತೆ ಹೇಳುತ್ತದೆ. ಆತ ನೇಪಾಳಿ ಹೆತ್ತವರಿಗೆ ಭಾರತದಲ್ಲಿ ಜನಿಸಿದ ಬಾಲಕ. ತನ್ನ ಸಹೋದರಿ ಮತ್ತು ತಂದೆಯ ಜೊತೆಗೆ ನೆಲೆಸುತ್ತಾನೆ. ತಾಯಿ ತೀರಿ ಹೋಗಿದ್ದಾಳೆ. ತಂದೆ ಕುಡುಕ. ಸೂರಜ್ ಗೆ ಶಾಲೆಗೆ ಹೋಗಬೇಕೆಂಬ ಅತೀವ ಆಸೆ. ಆದರೆ ಕುಟುಂಬವನ್ನು ಸಾಕಲು ಕೆಲಸ ಮಾಡಬೇಕು. ಕಾನೂನು ಬಾಲ ಕಾರ್ಮಿಕರನ್ನು ನಿಷೇಧಿಸಿದರೂ ದೇಶದಲ್ಲಿ ಈಗ ಐದರಿಂದ 17 ವರ್ಷ ವಯಸ್ಸಿನ 57 ಲಕ್ಷ ಬಾಲ ಕಾರ್ಮಿಕರು ಇದ್ದಾರೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಹೇಳಿದೆ. ಸಂಘಟನೆ ಪ್ರಕಾರ 168 ದಶಲಕ್ಷ ಬಾಲ ಕಾರ್ಮಿಕರು ಜಾಗತಿಕವಾಗಿ ಇದ್ದಾರೆ.
ಸಾಮಾಜಿಕ ಕಾರ್ಯಕರ್ತರು ಹೇಳುವ ಪ್ರಕಾರ ಎಲ್ಲಾ ಗಣಿ ಕಾರ್ಮಿಕರಲ್ಲಿ ಐದರಷ್ಟು ಭಾಗ ಮಕ್ಕಳು. ಹಲವರು 10 ಗಂಟೆಗಳಿಗೂ ಹೆಚ್ಚು ಕಾಲ ಕೆಟ್ಟ ಪರಿಸರದಲ್ಲಿ ಕಲ್ಲಿದ್ದಲಿನ ಧೂಳು, ಸಿಲಿಕಾ ಕೊಳೆ, ಹೊಗೆ ಮತ್ತು ಗಾಯಗಳ ನಡುವೆ ಜೀವನ ನಡೆಸುತ್ತಿದ್ದಾರೆ ಮತ್ತು ಸಾಯುತ್ತಿದ್ದಾರೆ. ಭಯದಿಂದ ಕೆಲಸವಾಗುವುದಿಲ್ಲ. ಜೀವದ ಭಯ ಬಿಡಬೇಕಾಗುತ್ತದೆ. ಇಲ್ಲಿ ಸತ್ತರೆ ಅದು ನಾಯಿಪಾಡು ಎನ್ನುವುದು ಸೂರಜ್ ಜೊತೆಗಿರುವ ಮತ್ತೊಬ್ಬ ಬಾಲಕನ ಮಾತು. ಮೇಘಾಲಯದಲ್ಲಿ ಹಲವು ಕಾರ್ಮಿಕರು ನೇಪಾಳ ಮತ್ತು ಬಾಂಗ್ಲಾದೇಶಿಗರು. ಉತ್ತಮ ಉದ್ಯೋಗದ ಆಸೆಯಲ್ಲಿ ಬಂದ ಇವರು ಪ್ರಭಾವೀ ಗಣಿ ಮಾಲೀಕರ ಗುಲಾಮರಾಗುತ್ತಾರೆ. 2012ರ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಸಮಿತಿಯ ವರದಿಯಲ್ಲಿ ಜನೈತಾ ಹಿಲ್ಸ್ ಅಲ್ಲಿ ಮಕ್ಕಳು ಅತೀ ಮಾರಕ ಪರಿಸರದಲ್ಲಿ ಸುರಕ್ಷೆ ಮತ್ತು ಸಾಮಾಜಿಕ ಸೌಲಭ್ಯಗಳಿಲ್ಲದೆ ಕೆಲಸ ಮಾಡುವುದನ್ನು ಉಲ್ಲೇಖಿಸಲಾಗಿದೆ. ಆದರೆ ರಾಜ್ಯದ ಅಧಿಕಾರಿಗಳು ಬಾಲ ಕಾರ್ಮಿಕರು ಇರುವುದನ್ನು ನಿರಾಕರಿಸಿದೆ. ಆದರೆ ವರದಿ ಹೇಳಿರುವ ಪ್ರಕಾರ ಅತೀ ಸಣ್ಣ ತೂತುಗಳಲ್ಲಿ ವಯಸ್ಕರು ಹೋಗಲು ಸಾಧ್ಯವಿಲ್ಲದ ಕಾರಣ ಮಕ್ಕಳೇ ಅಲ್ಲಿ ಕೆಲಸ ಮಾಡುತ್ತಾರೆ.
ಅಂತಿಮವಾಗಿ ಸೂರಜ್ ಗೆ ಶಿಕ್ಷಣದ ಅವಕಾಶ ಸಿಗುತ್ತದೆ. ಗಣಿಯಲ್ಲೇ ಕೆಲಸ ಮಾಡುವ ಆತನ ಸ್ನೇಹಿತರು ಸೂರಜ್ ಶಾಲೆಗೆ ಹೋಗಲು ನೆರವಾಗುತ್ತಾರೆ. ಗಣಿ ಕಾರ್ಮಿಕರದು ಅನಿಶ್ಚಿತತೆಯ ಜೀವನ. ಹಾಗಿದ್ದರೂ ಸ್ನೇಹ ಮತ್ತು ಪ್ರೀತಿಗೆ ಕಡಿಮೆ ಇಲ್ಲ. ಅದೇ ಅವರಿಗೆ ಭವಿಷ್ಯದ ಕಡೆಗೆ ಸಾಗಲು ಪ್ರೇರಣೆ. ಕೆಲವರಿಗೆ ಬದಲಾವಣೆಯ ಭರವಸೆಯನ್ನೂ ಕೊಡುತ್ತದೆ ಎನ್ನುತ್ತಾರೆ ರೆಡ್ಡಿ.
ಕೃಪೆ : http://everylifecounts.ndtv.com/







