ರಿಯೋ ಒಲಿಂಪಿಕ್ಸ್: ಹರ್ಯಾಣದ ಮಹಿಳೆಯರ ಮೇಲುಗೈ!

ಚಂಡೀಗಢ, ಜು.13: ಹರ್ಯಾಣ ರಾಜ್ಯ ಹೆಣ್ಣು ಭ್ರೂಣ ಹತ್ಯೆ ಹಾಗೂ ಪಿತೃಪ್ರಭುತ್ವದ ಮನಸ್ಥಿತಿಯ ಮೂಲಕ ಹೆಚ್ಚು ಕುಖ್ಯಾತಿ ಪಡೆದಿದೆ. ಆದರೆ, ವಿಶ್ವದ ಶ್ರೇಷ್ಠ ಕ್ರೀಡಾಕೂಟ ಒಲಿಂಪಿಕ್ಸ್ ಪ್ರಾತಿನಿಧ್ಯ ವಿಷಯಕ್ಕೆ ಬಂದಾಗ ರಾಜ್ಯದ ಮಹಿಳೆಯರು ಪುರುಷರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ.
ಬ್ರೆಝಿಲ್‌ನಲ್ಲಿ ನಡೆಯಲಿರುವ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಭಾರತ ತಂಡದಲ್ಲಿ ಹರ್ಯಾಣ ರಾಜ್ಯದ ಅಥ್ಲೀಟ್‌ಗಳು ಗರಿಷ್ಠ ಸಂಖ್ಯೆಯಲ್ಲಿದ್ದಾರೆ. ಈ ಬಾರಿ ಭಾರತ ಒಲಿಂಪಿಕ್ಸ್‌ಗೆ ಕಳುಹಿಸಿಕೊಡುತ್ತಿರುವ ಗರಿಷ್ಠ 120 ಅಥ್ಲೀಟ್‌ಗಳ ಪೈಕಿ 21 ಅಥ್ಲೀಟ್‌ಗಳು ಹರ್ಯಾಣ ರಾಜ್ಯದವರು. ರಾಜ್ಯದ 12 ಮಹಿಳೆಯರು ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಹಾಕಿ ತಂಡದಲ್ಲಿ ಆರು, ಕುಸ್ತಿಯಲ್ಲಿ ಮೂವರು, ಅಥ್ಲೆಟಿಕ್ಸ್‌ನಲ್ಲಿ ಇಬ್ಬರು ಹಾಗೂ ಸ್ವಿಮ್ಮಿಂಗ್‌ನಲ್ಲಿ ಓರ್ವ ಮಹಿಳೆಯರು ಭಾಗವಹಿಸುತ್ತಿದ್ದಾರೆ.
ಇದೇ ಮೊದಲ ಬಾರಿ ಭಾರತದ ಮೂವರು ಮಹಿಳೆಯರು ಕುಸ್ತಿ ಕಣದಲ್ಲಿ ಅದೃಷ್ಟ ಪರೀಕ್ಷಿಸಲಿದ್ದಾರೆ. ಸಾಕ್ಷಿ ಮಲಿಕ್, ಬಬಿತಾ ಫೋಗತ್ ಹಾಗೂ ವಿನೇಶ್ ಫೋಗತ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿದ್ದು, ಇವರೆಲ್ಲರೂ ಹರ್ಯಾಣದವರು.
ಮಂಗಳವಾರ ಘೋಷಿಸಲ್ಪಟ್ಟ 16 ಸದಸ್ಯೆಯರನ್ನು ಒಳಗೊಂಡ ಮಹಿಳಾ ಹಾಕಿ ತಂಡದಲ್ಲಿ ರಾಜ್ಯದ ಆರು ಆಟಗಾರ್ತಿಯರಿದ್ದಾರೆ. ಅವರುಗಳೆಂದರೆ: ದೀಪಿಕಾ ಥಾಕೂರ್(ಉಪನಾಯಕಿ), ರಾಣಿ ರಾಂಪಾಲ್, ನವಜೋತ್ ಕೌರ್, ಮೋನಿಕಾ, ಗೋಲ್‌ಕೀಪರ್ ಸವಿತಾ ಪೂನಿಯಾ ಹಾಗೂ ಪೂನಂ ಮಲಿಕ್.
ರಾಜ್ಯದ ಡಿಸ್ಕಸ್ ಎಸೆತಗಾರ್ತಿ ಸೀಮಾ ಪೂನಿಯಾ ಮೂರನೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಓಟಗಾರ್ತಿ ನಿರ್ಮಲಾ ಶೆರೊನ್ ಚೊಚ್ಚಲ ಒಲಿಂಪಿಕ್ಸ್ ಆಡಲಿದ್ದಾರೆ. ಗುರ್ಗಾಂವ್‌ನ ಶಿವಾನಿ ಕಟಾರಿಯಾ ಸ್ವಿಮ್ಮಿಂಗ್‌ನಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.
ಲಂಡನ್‌ನಲ್ಲಿ 2012ರಲ್ಲಿ ನಡೆದ ಒಲಿಂಪಿಕ್ಸ್ ಕೂಟದಲ್ಲಿ ಹರ್ಯಾಣದ 16 ಅಥ್ಲೀಟ್‌ಗಳಿದ್ದರು. ಕೇವಲ ಐವರು ಮಹಿಳೆಯರು ರಾಜ್ಯವನ್ನು ಪ್ರತಿನಿಧಿಸಿದ್ದರು.







