ಜು.21ರಿಂದ ಮಂಗಳೂರಿನಲ್ಲಿ ಇಂಡಿಪೆಂಡೆನ್ಸ್ ಕಪ್’ ಫುಟ್ಬಾಲ್ ಪಂದ್ಯ

ಮಂಗಳೂರು, ಜು.13: ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್‌ನಿಂದ 20ನೆ ವರ್ಷದ ‘ಇಂಡಿಪೆಂಡೆನ್ಸ್ ಕಪ್’ ಫುಟ್ಬಾಲ್ ಅದ್ದೂರಿ ಪಂದ್ಯಾವಳಿಯನ್ನು ಜು.21 ರಂದು ಬೆಳಗ್ಗೆ 10 ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ಮನಪಾ ಮೇಯರ್ ಕೆ. ಹರಿನಾಥ್ ಉದ್ಘಾಟಿಸುವರು ಎಂದು ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ.ಅಸ್ಲಾಂ ತಿಳಿಸಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 15ರಂದು ಸಮಾರೋಪ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಏಳು ವಿಭಾಗಗಳಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಒಟ್ಟು ಸುಮಾರು 250 ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಾಲಕ ಹಾಗೂ ಬಾಲಕಿಯರಿಗೆ (5 ರಿಂದ 7ನೆ ತರಗತಿ ತನಕ) ಪ್ರೌಢ ಶಾಲಾ ವಿಭಾಗದಲ್ಲಿ ಬಾಲಕರು ಹಾಗೂ ಬಾಲಕಿಯರಿಗೆ (8 ರಿಂದ 10 ನೆ ತರಗತಿ ತನಕ), ಪಿಯು ಕಾಲೇಜು ವಿಭಾಗ ಹಾಗೂ ಕಾಲೇಜು ವಿಭಾಗದಲ್ಲಿ ಬಾಲಕರು ಹಾಗೂ ಕಾಲೇಜು ಮಹಿಳಾ ತಂಡಗಳಿಗೆ (ಪಿಯು ಕಾಲೇಜು ಹಾಗೂ ಕಾಲೇಜು ಬಾಲಕಿಯರ ಮಿಶ್ರ ತಂಡ) ಹೀಗೆ ಒಟ್ಟು 7 ವಿಭಾಗಗಳಲ್ಲಿ ಪಂದ್ಯಾಟ ನಡೆಯಲಿದೆ.
ಕಾಲೇಜು ವಿಭಾಗದಲ್ಲಿ ಎಲ್ಲಾ ರೀತಿಯ ಪದವಿ ಕಾಲೇಜು (3 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಕೋರ್ಸುಗಳಲ್ಲಿ ಕಲಿಯುವವರು) ವೃತ್ತಿಪರ ಕಾಲೇಜು (ಇಂಜಿನಿಯರಿಂಗ್, ಮೆಡಿಕಲ್, ಪಾರಾ ಮೆಡಿಕಲ್, 3 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಡಿಪ್ಲೊಮಾ ಕೋರ್ಸು ಮಾಡುವ ವಿದ್ಯಾರ್ಥಿಗಳಿಗೆ ಭಾಗವಹಿಸುವ ಅವಕಾಶವಿದೆ.
ಶಾಲಾ ಕಾಲೇಜು ಮಟ್ಟದಲ್ಲಿಯೇ ಪುಟ್ಬಾಲ್ ಆಟದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಸಕ್ತಿ ಬೆಳೆಸುವ ಮತ್ತು ಆ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರತಿಭಾವಂತ ಆಟಗಾರರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದೇಶದ 50ನೆ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಫುಟ್ಬಾಲ್ ಸಂಸ್ಥೆ ಇಂಡಿಪೆಂಡೆನ್ಸ್ ಕಪ್ ಪುಟ್ಬಾಲ್ ಪಂದ್ಯಾವಳಿಯನ್ನು ಹುಟ್ಟು ಹಾಕಿತು. ಕಳೆದ 10 ವರ್ಷ ಅವಧಿಯಲ್ಲಿ ಇಲ್ಲಿನ 200 ಕ್ಕೂ ಅಧಿಕ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ ಎಂದು ತಿಳಿಸಿದರು.
ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಪಂದ್ಯಾಟ ಜುಲೈ 21 ರಿಂದ 23ವರೆಗೆ ನಡೆಯಲಿದ್ದು, ಜುಲೈ 18 ನೋಂದಾಯಿಸಲು ಕಡೆ ದಿನಾಂಕವಾಗಿದೆ. ಹೈಸ್ಕೂಲ್ ಬಾಲಕ ಹಾಗೂ ಬಾಲಕಿಯರ ವಿಭಾಗದ ಪಂದ್ಯಗಳು ಜುಲೈ 24ರಿಂದ 31ರವೆರೆಗೆ ನಡೆಯಲಿದು, ಜುಲೈ 18 ನೋಂದಾಯಿಸಲು ಕಡೆ ದಿನಾಂಕವಾಗಿದೆ. ಕಾಲೇಜು ಮಹಿಳಾ ವಿಭಾಗದ ಪಂದ್ಯಗಳು ಆಗಸ್ಟ್ 1 ಮತ್ತು 2ರಂದು ಹಾಗೂ ಪಿಯು ಕಾಲೇಜು ಬಾಲಕರ ವಿಭಾಗ ಆಗಸ್ಟ್ 3 ರಿಂದ 8ರವರೆಗೆ ನಡೆಯಲಿದ್ದು ಜುಲೈ 28 ನೋಂದಾಯಿಸಲು ಕಡೆ ದಿನಾಂಕವಾಗಿದೆ. ಕಾಲೇಜು ವಿಭಾಗದ ಪಂದ್ಯಾಟ ಆಗಸ್ಟ್ 9 ರಿಂದ 14ರವರೆಗೆ ನಡೆಯಲಿದ್ದು, ಆಗಸ್ಟ್ 2 ನೋಂದಾಯಿಸಲು ಕಡೆಯ ದಿನಾಂಕವಾಗಿದೆ.
ವಿಜೇತ ತಂಡಗಳಿಗೆ ಆಕರ್ಷಕ ರೋಲಿಂಗ್ ಟ್ರೋಫಿ, ಶಾಶ್ವತ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವುದು. 20ನೆ ವರ್ಷದ ಪಂದ್ಯಾವಳಿ ಪ್ರಯುಕ್ತ ಎಲ್ಲಾ ವಿಭಾಗಗಳಲ್ಲಿ ಉತ್ತಮ ಆಟಗಾರ, ಆಟಗಾರ್ತಿ, ಉತ್ತಮ ಗೋಲ್ ಕೀಪರ್ ಹಾಗೂ ಉತ್ತಮ ರಕ್ಷಣೆ ಆಟಗಾರ, ಆಟಗಾರ್ತಿ ಎಂಬ ವಿಶೇಷ ಬಹುಮಾನ ಪ್ರಕಟಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಫುಟ್ಬಾಲ್ ರಾಜ್ಯ ಮಟ್ಟದ ಆಟಗಾರ ಬೇಬಿ ಥೋಮಸ್, ದ.ಕ ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಕಾರ್ಯದರ್ಶಿ ಮುಹಮ್ಮದ್ ಹುಸೇನ್ ಬೋಳಾರ, ಸಂಸ್ಥೆಯ ಪದಾಧಿಕಾರಿಗಳಾದ ಯುವರಾಜ್ ಬೆಂಗ್ರೆ, ಅನಿಲ್ ಪಿ.ವಿ., ವಿಜಯ್ ಸುವರ್ಣ ಉಪಸ್ಥಿತರಿದ್ದರು.







