ಓದಿದ್ದು, ಕಲಿತದ್ದು ಮುಖ್ಯವಲ್ಲ ಬದುಕಿಗೆ ಅಳವಡಿಸಿಕೊಂಡಿದ್ದು ಮುಖ್ಯ: ಫ್ರಾನ್ಸಿಸ್ ಹೆಲ್ಮೆಡ್

ಹಾಸನ, ಜು.13: ನಾವು ಏನು ಓದಿದ್ದೇವೆ ಅಥವಾ ಕಲಿತಿದ್ದೇವೆ ಎನ್ನುವುದು ಮುಖ್ಯವಲ್ಲ. ಆ ಕಲಿಕೆಯನ್ನು ಎಷ್ಟರ ಮಟ್ಟಿಗೆ ಅರ್ಥೈಸಿಕೊಂಡೆ ಮತ್ತು ಅರ್ಥೈಸಿಕೊಂಡದ್ದನ್ನು ಎಲ್ಲಿ ಮತ್ತು ಹೇಗೆ ಅಳವಡಿಸಿಕೊಂಡು ಸ್ವಾವಲಂಬಿಯಾಗಿ ಅಭಿವೃದ್ಧಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಪಟ್ಟೆ ಅನ್ನುವುದೇ ಕಲಿಕೆಯ ಅಂತಿಮ ಮಾನದಂಡ ಎಂದು ನಗರದಲ್ಲಿ ಬಾಬಣ್ಣ ಎಂದೇ ಪ್ರಸಿದ್ಧರಾದ ಹಿರಿಯ ಉದ್ಯಮಿ ಫ್ರಾನ್ಸಿಸ್ ಹೆಲ್ಮೆಡ್ ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ದೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ಉದ್ಯೋಗ ಮತ್ತು ತರಬೇತಿ ಇಲಾಖೆಯ ಸಹಯೋಗದಲ್ಲಿ ಸಿದ್ದೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ವಿಶ್ವಕೌಶಲ್ಯ ದಿನ (ವರ್ಲ್ಡ್ ಸ್ಕಿಲ್ ಡೇ) ಮತ್ತು ಇದರ ಭಾಗವಾಗಿ ಹಮ್ಮಿಕೊಂಡಿದ್ದ ಐಟಿಐನಲ್ಲಿ ವಿದ್ಯಾರ್ಥಿಗಳು ತಯಾರಿಸಿದ್ದ ಮಾದರಿಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸ್ಥೆಯ ತರಬೇತಿ ಅಧಿಕಾರಿ ಸಿ.ಆರ್.ಜಯರಾಂ ಮಾತನಾಡಿ, ಬರೀ ಉರು ಹಚ್ಚುವ ಮೂಲಕ ಪ್ರಮಾಣಪತ್ರ ಗಳಿಸಿದರೆ ಊಟ ಮತ್ತು ಉದ್ಯೋಗ ತಂದು ಕೊಡದು. ಪರೀಕ್ಷೆ ಫಲಿತಾಂಶಕ್ಕಿಂತ ವೃತ್ತಿಯಲ್ಲಿ ಗಳಿಸಿದ ಕೌಶಲ್ಯತೆ ಪ್ರಮಾಣ ಪತ್ರ ಮೀರಿ ಬದುಕನ್ನು ಕಟ್ಟಿಕೊಡುತ್ತದೆ. ಹಾಗಾಗಿ ಪರೀಕ್ಷೆ ಎಂಬುದು ಜ್ಞಾನಕ್ಕೆ, ಕೌಶಲ್ಯ ಬದುಕಿಗೆ. ಅದನ್ನು ವೃದ್ದಿಪಡಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಎ.ಎಂ.ಇಂದ್ರಶೇಖರ್ ಮಾತನಾಡಿದರು. ಸಂಸ್ಥೆ ಆವರಣದಿಂದ ಐಟಿಐ ವಿದ್ಯಾರ್ಥಿಗಳು ಮಂಜುನಾಥ ಆಯುರ್ವೇದ ಕಾಲೇಜು, ತಣ್ಣೀರುಹಳ್ಳ ವೃತ್ತ, ಗುಹೆಕಲ್ಲಮ್ಮ ದೇವಾಲಯದ ಮಾರ್ಗವಾಗಿ ಕೌಶಲ್ಯ ಪೂರ್ಣ ಕಲಿಕೆಯ ಮಹತ್ವ ಬಿತ್ತರಿಸುವ ಫಲಕಗಳನ್ನು ಹಿಡಿದು ಜಾಥಾ ನಡೆಸಿದರು. ಜಾಥಾದ ಉದ್ಘಾಟನೆಯನ್ನು ಸಂಸ್ಥೆಯ ಕಾರ್ಯದರ್ಶಿ ಎಚ್.ಎಸ್.ಶಂಕರಯ್ಯ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಶ್ರೀಸಿದ್ದೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ಐಟಿಐ ವಿದ್ಯಾರ್ಥಿಗಳು ತಮ್ಮ ಕೌಶಲ್ಯದಿಂದ ತಯಾರಿಸಿದ ಮಾದರಿಗಳ ಮತ್ತು ಶಿಕ್ಷಕರ ಬೋಧನಾ ಸಾಮಗ್ರಿಗಳ ವಸ್ತು ಪ್ರದರ್ಶನ, ಸಂವಾದ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಪ್ರೌಢಶಾಲೆ ದೊಡ್ಡ ಮಂಡಿಗನಹಳ್ಳಿ, ಸತ್ಯನಾರಾಯಣ ಪ್ರೌಢಶಾಲೆ, ಉದ್ದೂರು, ಶ್ರೀ ಬಸವೇಶ್ವರ ಪ್ರೌಢಶಾಲೆ ಉಗನೆ ಹಾಗೂ ಶ್ರೀ ಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಸ್ತುಪ್ರದರ್ಶನವನ್ನು ವೀಕ್ಷಿಸಿದರು.







