ಆ.1ರಿಂದ ವಿಮಾನ ಟಿಕೆಟ್ ರದ್ದತಿ ಶುಲ್ಕ ಅಗ್ಗ
ಹೊಸದಿಲ್ಲಿ, ಜು.13: ವಿಮಾನ ಟಿಕೆಟ್ ರದ್ದತಿ ಶುಲ್ಕಕ್ಕೆ ಮಿತಿ ಹಾಗೂ ಮರು ಪಾವತಿ ಪ್ರಕ್ರಿಯೆಗೆ ವಿಮಾನ ಯಾನ ಕಂಪೆನಿಗಳು ಹೆಚ್ಚುವರಿ ಹಣ ವಸೂಲು ಮಾಡದಂತೆ ನಿರ್ಬಂಧಿಸುವ ಪರಿಷ್ಕೃತ ನಿಯಮಾವಳಿ ಆ.1ರಿಂದ ಜಾರಿಗೆ ಬರಲಿದೆ.
ಇದರೊಂದಿಗೆ, ಟಿಕೆಟ್ ರದ್ದತಿಗೆ ಅಂಗೀಕೃತ ಹಿಂಪಾವತಿ ಮೊತ್ತವನ್ನು ವಿಮಾನ ಸಂಸ್ಥೆಗಳು ‘ನಿಸ್ಸಂದಿಗ್ಧ ರೀತಿಯಲ್ಲಿ’ ಸೂಚಿಸಬೇಕು.
ಯಾವುದೇ ಸಂದರ್ಭದಲ್ಲಿ ವಿಮಾನ ಸಂಸ್ಥೆ ಗಳು ಮೂಲ ಪ್ರಯಾಣ ಶುಲ್ಕ ಹಾಗೂ ಇಂಧನ ಸರ್ಚಾರ್ಜ್‌ಗಳ ಮೊತ್ತಕ್ಕಿಂತ ಹೆಚ್ಚು ಹಣವನ್ನು ಟಿಕೆಟ್ ರದ್ದತಿಗೆ ವಿಧಿಸಬಾರದೆಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ಸ್ಪಷ್ಟಪಡಿಸಿದೆ.
ಹಿಂಪಾವತಿ ಪ್ರಕ್ರಿಯೆಗೆ ವಿಮಾನ ಸಂಸ್ಥೆಗಳು ಹೆಚ್ಚುವರಿ ಶುಲ್ಕವನ್ನು ವಿಧಿಸಬಾರದೆಂದೂ ಅದು ಹೇಳಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ವಿಮಾನ ಸಂಸ್ಥೆಗಳು ಟಿಕೆಟ್ ರದ್ದತಿ ಶುಲ್ಕವನ್ನು ಏರಿಕೆ ಮಾಡಿ ರುವ ಹಿನ್ನೆಲೆಯಲ್ಲಿ ಈ ನಿಯಮಾವಳಿ ವಿಮಾನ ಪ್ರಯಾಣಿಕರಿಗೆ ಪರಿಹಾರವಾಗಿ ಒದಗಿ ಬಂದಿದೆ.
ಹೊಸ ನಿಯಮಾವಳಿ ಹೊರಡಿಸಿರುವ ಡಿಜಿಸಿಎ, ವಿಮಾನ ಟಿಕೆಟ್ ರದ್ದತಿ, ಉಪಯೋಗಿಸದಿರುವ ಅಥವಾ ತೋರಿಸದಿರುವ ಸಂದರ್ಭದಲ್ಲಿ ಪ್ರಯಾಣಿಕರಿಗೆ ಎಲ್ಲ ಕಾಯ್ದೆಬದ್ಧ ತೆರಿಗೆಗಳು ಹಾಗೂ ಬಳಕೆದಾರ ಅಭಿವೃದ್ಧಿ ಶುಲ್ಕ(ಯುಡಿಎಫ್) ವಿಮಾನ ನಿಲ್ದಾಣ ಅಭಿವೃದ್ಧಿ ಶುಲ್ಕ(ಎಡಿಎಫ್), ಪ್ರಯಾಣಿಕ ಸೇವಾ ಶುಲ್ಕವನ್ನು ಸಂಪೂರ್ಣ ಹಿಂದಿರುಗಿಸಬೇಕೆಂದು ಹೇಳಿದೆ.





