ಪಂಕಜಾ ಮುಂಢೆ ಸಚಿವಾಲಯ ನೀಡಿದ್ದ 12,000ಕೋ.ರೂ.ಟೆಂಡರ್‌ಗಳು ರದ್ದು
ಬಾಂಬೆ ಉಚ್ಚ ನ್ಯಾಯಾಲಯದ ಮಹತ್ವದ ತೀರ್ಪು

ಮುಂಬೈ,ಜು.13: ಮಹಾರಾಷ್ಟ್ರ ಸರಕಾರವು ಅಂಗನವಾಡಿ ಮಕ್ಕಳಿಗಾಗಿ ಪಡಿತರ ಖರೀದಿ ಮತ್ತು ಪೂರೈಕೆಗಾಗಿ ಈ ವರ್ಷದ ಆರಂಭದಲ್ಲಿ ನೀಡಿದ್ದ 12,000 ಕೋ.ರೂ ವೌಲ್ಯದ ಟೆಂಡರ್‌ಗಳನ್ನು ಬಾಂಬೆ ಉಚ್ಚ ನ್ಯಾಯಾಲಯದ ಔರಂಗಾಬಾದ್ ಪೀಠವು ರದ್ದುಗೊಳಿಸಿದೆ. ಟೆಂಡರ್ ನೀಡಿಕೆಯಲ್ಲಿ ಅಕ್ರಮಗಳು ನಡೆದಿವೆಯೆಂದು ಸ್ವಸಹಾಯ ಗುಂಪು(ಎಸ್‌ಎಚ್‌ಜಿ)ಗಳು ಆರೋಪಿಸಿದ್ದವು.
‘ಟೇಕ್ ಹೋಮ್ ರೇಷನ್ ’ಯೋಜನೆಯಡಿ ಮನೆಗೊಯ್ದು ಆಹಾರ ಸಿದ್ಧಪಡಿಸಲು ಅಂಗನವಾಡಿ ಮಕ್ಕಳಿಗೆ ಆಹಾರ ಧಾನ್ಯಗಳು ಅಥವಾ ಪೋಷಕಾಂಶಗಳನ್ನೊಳಗೊಂಡ ಕಚ್ಚಾ ಸಾಮಗ್ರಿಗಳನ್ನು ನೀಡಲಾಗುತ್ತದೆ.
ರಾಜ್ಯದಲ್ಲಿಯ 10,000ಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳಿಗೆ ಆಹಾರ ಧಾನ್ಯಗಳಿಗಾಗಿ ಪಂಕಜಾ ಮುಂಢೆ ಅವರ ನೇತೃತ್ವದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಈ ವರ್ಷದ ಫೆಬ್ರುವರಿಯಲ್ಲಿ ಟೆಂಡರ್‌ಗಳನ್ನು ನೀಡಿತ್ತು.
ಮಹಿಳೆಯರಿಗೆ ಉದ್ಯೋಗ ದೊರೆಯುವಂತಾಗಲು ಮತ್ತು ಸ್ಥಳೀಯವಾಗಿ ಆದ್ಯತೆಯ ಪೋಷಕಾಂಶ ಆಹಾರ ಸಾಮಗ್ರಿಗಳು ಪೂರೈಕೆಯಾಗುವಂತಾಗಲು ಇಂತಹ ಟೆಂಡರ್‌ಗಳನ್ನು ಸೂಕ್ತ ಪ್ರಕ್ರಿಯೆಯ ಮೂಲಕ ಎಸ್‌ಎಚ್‌ಜಿಗಳಿಗೆ ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯವು ತನ್ನ ಮಾರ್ಗಸೂಚಿಯಲ್ಲಿ ರಾಜ್ಯಸರಕಾರಗಳಿಗೆ ಸ್ಪಷ್ಟವಾಗಿ ಸೂಚಿಸಿದ್ದರೂ ಟೆಂಡರ ಷರತ್ತುಗಳನ್ನು ದೊಡ್ಡ ಕಂಪನಿಗಳು ಮತ್ತು ಗುತ್ತಿಗೆದಾರರ ಸ್ಥಾಪಿತ ಕೂಟಗಳಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ ಎಂದು ಸ್ವಸಹಾಯ ಗುಂಪುಗಳು ಆರೋಪಿಸಿದ್ದವು.
ಉಚ್ಚ ನ್ಯಾಯಾಲಯದ ತೀರ್ಪು ತನ್ನದು ಭ್ರಷ್ಟಚಾರರಹಿತ ಆಡಳಿತವೆಂಬ ಭಾವನೆಯನ್ನು ಮೂಡಿಸಲು ಯತ್ನಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಹಿನ್ನಡೆಯನ್ನುಂಟು ಮಾಡಿದೆ. ಕಳೆದ ತಿಂಗಳು ಭೂ ಕಬಳಿಕೆಯ ಆರೋಪದಲ್ಲಿ ತನ್ನ ಸಂಪುಟದಲ್ಲಿ ಅತ್ಯಂತ ಹಿರಿಯ ಸಚಿವರಾಗಿದ್ದ ಏಕನಾಥ ಖಾಡ್ಸೆಯವರನ್ನು ಉಚ್ಚಾಟಿಸುವುದು ಅವರಿಗೆ ಅನಿವಾರ್ಯವಾಗಿತ್ತು. ತೀರ್ಪು ಕಳೆದ ವಾರ ತನ್ನ ಪ್ರಮುಖ ಖಾತೆಗಳನ್ನು ಕಳೆದುಕೊಂಡಿದ್ದ ಮುಂಢೆಯವರಿಗೂ ಹಿನ್ನಡೆಯಾಗಿದೆ.





