ವನ್ಯಜೀವಿಗಳು ಪ್ರಕೃತಿಯ ಅಪೂರ್ವ ಕೊಡುಗೆ: ವಸಂತ್
ವನ್ಯಜೀವಿ, ಮಾನವ ಸಂಘರ್ಷ ಕುರಿತು ಕಾರ್ಯಾಗಾರ

ಹೊನ್ನಾವರ, ಜು.13: ವನ್ಯಜೀವಿಗಳು ಸಂರಕ್ಷಿಸಲೇಬೇಕಾದ ಸಂಪತ್ತು ಹಾಗೂ ಪ್ರಕೃತಿ ನೀಡಿದ ಅಪೂರ್ವ ಕೊಡುಗೆ. ಅವುಗಳ ಸಂರಕ್ಷಣೆಯ ಕುರಿತು ಸಾರ್ವಜನಿಕರು ಆಸಕ್ತಿ ಬೆಳೆಸಿಕೊಂಡು ಇಲಾಖೆಯ ಜೊತೆ ಸಹಕರಿಸಬೇಕು ಎಂದು ಹೊನ್ನಾವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ.ವಿ. ಹೇಳಿದ್ದಾರೆ.
ಅರಣ್ಯ ಇಲಾಖೆ ಹಾಗೂ ಬೆಂಗಳೂರಿನ ನೇಚರ್ ಕನ್ಸರ್ವೇಷನ್ ಫೌಂಡೇಷನ್ ಸಹಯೋಗದಲ್ಲಿ ಕಾಸರಕೋಡದ ಕಾಂಡ್ಲ ಮಾಹಿತಿ ಕೇಂದ್ರದಲ್ಲಿ ನಡೆದ ‘ವನ್ಯಜೀವಿ ಮತ್ತು ಮಾನವ ಸಂಘರ್ಷ ಕುರಿತು ತರಬೇತಿ’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ನೇಚರ್ ಕನ್ಸರ್ವೇಷನ್ ಫೌಂಡೇಷನ್‌ನ ವನ್ಯಜೀವಿ ವಿಜ್ಞಾನಿ ಸಂಜಯ್ ಗುಬ್ಬಿ ಮಾತನಾಡಿ, ವನ್ಯಜೀವಿಗಳು ಜನವಸತಿ ಪ್ರದೇಶಗಳಿಗೆ ಪ್ರವೇಶಿಸಿದಾಗ ಅವುಗಳನ್ನು ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಡುವ ಪ್ರಕ್ರಿಯೆಯ ಕುರಿತು ವಿವಿಧ ಸ್ಥಳಗಳಲ್ಲಿನ ತನ್ನ ಕಾರ್ಯಾಚರಣೆಯ ಅನುಭವಗಳನ್ನು ಸ್ಲೈಡ್ ಶೋ ಮೂಲಕ ಪ್ರಸ್ತುತಪಡಿಸಿದರು. ನೇಚರ್ ಕನ್ಸರ್ವೇಷನ್ ಫೌಂಡೇಷನ್ ಸದಸ್ಯ ಹರೀಶ್ ನಾಗಶೆಟ್ಟಿಹಳ್ಳಿ ಮಾತನಾಡಿ, ವನ್ಯಪ್ರಾಣಿ ಸಂರಕ್ಷಣೆಯಲ್ಲಿ ಆಧುನಿಕ ಉಪಕರಣಗಳು, ಕ್ಯಾಮರಾ ಟ್ರಾಪಿಂಗ್ ಮುಂತಾದ ತಾಂತ್ರಿಕತೆಯ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪಶುವೈದ್ಯ ಸಹಾಯಕ ನಿರ್ದೇಶಕ ಡಾ. ಸುಜಯ್ ಸುರೇಶ್, ವನ್ಯಜೀವಿ ಸಂರಕ್ಷಣೆಯಲ್ಲಿ ಪಾಲ್ಗೊಳ್ಳುವ ಕುರಿತು ತಿಳಿಸಿದರು. ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಎಚ್.ಸಿ. ಸ್ವಾಗತಿಸಿದರು. ಭಟ್ಕಳ ಹಾಗೂ ಕುಮಟಾ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್ ಎಲ್, ಎಸ್.ವಿ.ನಾಯ್ಕ, ಹೊನ್ನಾವರ ವಲಯ ಅರಣ್ಯಾಧಿಕಾರಿ ಪ್ರವೀಣ್ ಆರ್.ನಾಯಕ, ಉಪವಲಯ ಅರಣ್ಯಾಧಿಕಾರಿ ಹರಿಶ್ಚಂದ್ರ ಪಟಗಾರ, ಪೂರ್ಣೇಶ್ ಎಚ್.ಸಿ., ಅವಿನಾಶ್ ಆರ್., ಅಪರ್ಣ ಕೆ. ಹಾಗೂ ಮಹೇಶ್ ಎಂ. ಹಾಗೂ ವಿಭಾಗದ ವಲಯ ಅರಣ್ಯಾಧಿಕಾರಿಗಳು, ಉಪವಲಯ ಅರಣ್ಯಾಧಿಕಾರಿಗಳು, ಅರಣ್ಯ ರಕ್ಷಕರು, ಆರಕ್ಷಕ ಉಪ ನಿರೀಕ್ಷಕರು, ಪಶು ವೈದ್ಯಾಧಿಕಾರಿಗಳು, ಅಗ್ನಿಶಾಮಕ ದಳದ ಸಿಬ್ಬಂದಿ, ಗ್ರಾಮ ಅರಣ್ಯ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.







