ಕರ್ಫ್ಯೂ ಉಲ್ಲಂಘಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ ಕಾಶ್ಮೀರಿಗಳು!
ಅಮರನಾಥ ಯಾತ್ರಿಕರ ಬಸ್ ಅಪಘಾತ
ಶ್ರೀನಗರ, ಜು.13: ಕರ್ಫ್ಯೂ ನಿಯಂತ್ರಣವನ್ನು ಉಲ್ಲಂಘಿಸಿದ ಸ್ಥಳೀಯ ಮುಸ್ಲಿಮರು ಬುಧವಾರ, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ-1ಎಯಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಅಮರನಾಥ ಯಾತ್ರಿಕರನ್ನು ತಮ್ಮ ಜೀವಗಳನ್ನು ಒತ್ತೆಯಿಟ್ಟು ರಕ್ಷಿಸಿ, ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅಮರನಾಥ ಯಾತ್ರಿಕರನ್ನು ಹೊತ್ತಿದ್ದ ಮಿನಿಬಸ್ ಒಂದು ಅನಂತನಾಗ್ ಜಿಲ್ಲೆಯ ಬಿಜ್‌ಬೆಹರಾ ಪಟ್ಟಣದ ಬಳಿ ಅಪಘಾತಕ್ಕೀಡಾಗಿ ಚಾಲಕ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಚಾಲಕನ ಸಹಿತ ಇಬ್ಬರು ಸಾವಿಗೀಡಾಗಿದ್ದು, ಇತರ 20 ಮಂದಿ ಗಾಯಗೊಂಡಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದಲ್ಲಿ ತಮ್ಮವರಿಬ್ಬರು ಅಸುನೀಗಿದ ಶೋಕಾಚರಣೆಯಲ್ಲಿ ಬಿಜ್‌ಬೆಹರಾದ ಸ್ಥಳೀಯರಿದ್ದರು. ಆದಾಗ್ಯೂ ತಮ್ಮ ವೈಯಕ್ತಿಕ ದುಃಖ ಹಾಗೂ ಕರ್ಫ್ಯೂವನ್ನು ನಿರ್ಲಕ್ಷಿಸಿದ ಅವರು ಅಪಘಾತದ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿದ್ದಾರೆ.
ಸ್ಥಳೀಯ ಮುಸ್ಲಿಮರು ತಮ್ಮ ಖಾಸಗಿ ವಾಹನಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಕೆಲವರನ್ನು ಶ್ರೀನಗರದ ಆಸ್ಪತ್ರೆಗೊಯ್ದರೆಂದು ಪ್ರತ್ಯಕ್ಷದರ್ಶಿಯೊಬ್ಬರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.
ಭಯೋತ್ಪಾದಕ ಬುರ್ಹಾನ್ ವಾನಿಯ ಹತ್ಯೆಯ ಬಳಿಕ ಕಣಿವೆಯಲ್ಲಿ ಭುಗಿಲೆದ್ದ ಹಿಂಸಾಚಾರಕ್ಕೆ 34 ನಾಗರಿಕರು ಹಾಗೂ ಒಬ್ಬ ಪೊಲೀಸ್ ಬಲಿಯಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಬಿಜ್‌ಬೆಹರಾದ ಸ್ಥಳೀಯರು ತೋರಿಸಿರುವ ಮಾನವೀಯತೆ ಶ್ಲಾಘನೀಯವಾಗಿದೆ.
ಹಿಂದಿನ ದಿನ ಬಿಜ್‌ಬೆಹರಾದಲ್ಲೇ ಇಬ್ಬರು ಪ್ರತಿಭಟನಾಕಾರು ಸಾವಿಗೀಡಾಗಿದ್ದು, ಬುಧವಾರ ಸ್ಥಳದಲ್ಲಿ ಭಾರೀ ಉದ್ವಿಗ್ನತೆ ಮನೆ ಮಾಡಿತ್ತು. ಸುತ್ತ ನಡೆಯುತ್ತಿದ್ದ ಹಿಂಸಾಚಾರದ ಹೊರತಾಗಿಯೂ ಸ್ಥಳೀಯರು ಮಾನವತೆಯ ಕರೆಯನ್ನು ಉಪೇ ಕ್ಷಿಸಲಿಲ್ಲ. ಇದು ಕಾಶ್ಮೀರದ ವಿಶೇಷತೆಯಾಗಿದೆ. ಅದನ್ನು ರಕ್ಷಿಸಿಕೊಳ್ಳಬೇಕೆಂದು ಪಟ್ಟಣದ ನಿವಾಸಿಯೊಬ್ಬರು ಹೇಳಿದ್ದಾರೆ.





