ಸಾಗರ: ಮದ್ಯದಂಗಡಿ ಸ್ಥಳಾಂತರಕೆ್ಕ ಒತಾ್ತಯ
ಸ್ಥಳೀಯ ಜನಪರ ಯುವ ವೇದಿಕೆಯಿಂದ ಧರಣಿ
.jpg)
ಸಾಗರ,ಜು.13: ತಾಲೂಕಿನ ತುಮರಿಯ ಮುಖ್ಯರಸ್ತೆಯಲ್ಲಿರುವ ಮದ್ಯದಂಗಡಿಯನ್ನು ಬೇರೆ ಕಡೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಸ್ಥಳೀಯ ಜನಪರ ಯುವ ವೇದಿಕೆಯು ಮದ್ಯದಂಗಡಿ ಎದುರು ಪ್ರತಿಭಟನೆ ನಡೆಸಿ, ಗ್ರಾಪಂಗೆ ಮನವಿ ಸಲ್ಲಿಸಿತು.
ಸೋಮವಾರ ರಾತ್ರಿ ವೈನ್‌ಶಾಪ್ ಎದುರು ತಿಮ್ಮಪ್ಪ ಹಾಗೂ ಸುರೇಶ್ ಎಂಬವರ ನಡುವೆ ಮಾತಿನ ಚಕಮಕಿ ನಡೆದಿದೆ. ಸುರೇಶ್ ಅವರು ತಿಮ್ಮಪ್ಪ ಅವರನ್ನು ದೂಡಿದ ಪರಿಣಾಮ ಕೆಳಗೆ ಬಿದ್ದು ಗಂಭೀರವಾಗಿ ತಲೆಗೆ ಹೊಡೆತ ಬಿದ್ದಿದೆ. ತಿಮ್ಮಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತಿದಿನ ಮದ್ಯದಂಗಡಿ ಎದುರು ಇಂತಹ ಗಲಾಟೆಗಳು ನಡೆಯುತ್ತವೆೆ ಎಂದು ಪ್ರತಿಭಟನಾಕಾರರು ದೂರಿದರು. ಹಾಲಿ ತುಮರಿ ಮುಖ್ಯರಸ್ತೆಯಲ್ಲಿರುವ ದಯಾನಂದ ಬಾರ್ ಎದುರಿನಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಇದೆ. ಪಕ್ಕದಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯವಿದೆ. ವೈನ್‌ಶಾಪ್‌ಗಳು ನಿಯಮಾವಳಿ ಪ್ರಕಾರ ಇಂತಿಷ್ಟು ದೂರದಲ್ಲಿ ಇರಬೇಕು. ಆದರೆ ನಿಯಮಾವಳಿಯನ್ನು ಗಾಳಿಗೆ ತೂರಿ ವೈನ್‌ಶಾಪ್ ನಡೆಸಲಾಗುತ್ತಿದೆ. ಅನೇಕ ಸಂದರ್ಭದಲ್ಲಿ ಮದ್ಯಪಾನಿಗಳು ಕುಡಿದ ಬಾಟಲಿಗಳನ್ನು ಪ್ರೌಢಶಾಲೆ ಒಳಗೆ, ವಿದ್ಯಾರ್ಥಿನಿ ನಿಲಯದ ಅಕ್ಕಪಕ್ಕ ಎಸೆಯುತ್ತಿದ್ದು, ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಹಲವು ಬಾರಿ ದಯಾನಂದ ಬಾರನ್ನು ಬೇರೆ ಕಡೆ ಸ್ಥಳಾಂತರಿಸುವಂತೆ ಜನಪ್ರತಿನಿಧಿಗಳಿಗೆ, ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಪ್ರತಿಭಟನೆ ಸಹ ಮಾಡಲಾಗಿದೆ. ಆದರೆ ಸ್ಥಳೀಯರ ಮನವಿಗೆ ಸ್ಪಂದಿಸದಿರುವ ಆಡಳಿತದ ವೈಖರಿ ಖಂಡನೀಯ. ಇದು ಮುಖ್ಯರಸ್ತೆಯಾಗಿದ್ದರಿಂದ ಮಹಿಳೆಯರು, ಮಕ್ಕಳು ಓಡಾಡುತ್ತಿರುತ್ತಾರೆ. ಬಾರ್ ಇರುವುದರಿಂದ ಈ ರಸ್ತೆಯಲ್ಲಿ ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಬಾರನ್ನು ಬೇರೆ ಕಡೆ ಸ್ಥಳಾಂತರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಕ್ರಮದ ಭರವಸೆ ಮನವಿ ಸ್ವೀಕರಿಸಿ ಮಾತನಾಡಿದ ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ದಯಾನಂದ ವೈನ್ಸ್ ಸ್ಥಳಾಂತರಗೊಳಿಸುವಂತೆ ಹಿಂದಿನಿಂದಲೂ ನಾವು ಸಹ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಲಾಗಿದೆ. ವೈನ್‌ಶಾಪ್ ತಕ್ಷಣ ಬೇರೆ ಕಡೆ ವರ್ಗಾವಣೆ ಮಾಡದೆ ಹೋದರೆ, ಗ್ರಾಪಂನಿಂದ ನಿರಾಕ್ಷೇಪಣಾ ಪತ್ರ ಸೇರಿದಂತೆ ಯಾವುದೇ ಸೌಲಭ್ಯ ನೀಡದಿರಲು ತೀರ್ಮಾನಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಲೋಕಪಾಲ ಜೈನ್, ಸಾವಿತ್ರಿ, ಜನಪರ ಯುವ ವೇದಿಕೆಯ ರವಿ, ಶಿವರಾಜ್, ಸಂತೋಷ್ ಶೆಟ್ಟಿ, ಗಣೇಶ್, ಬೇಸೂರು ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.





