ರಕ್ಷಣೆ ಕೋರಿ ಅಗ್ರಿ ಗೋಲ್ಡ್ ಏಜೆಂಟರಿಂದ ಧರಣಿ
ವಂಚನೆ ಪ್ರಕರಣ

ಚಿಕ್ಕಮಗಳೂರು, ಜು.13: ಆಂಧ್ರ ಮೂಲದ ಅಗ್ರಿ ಗೋಲ್ಡ್ ಫಾರ್ಮ ಎಸ್ಟೇಟ್ ಕಂಪೆನಿಯ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ, ತಮಗೆ ಗ್ರಾಹಕರಿಂದ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಕಂಪೆನಿಯ ಏಜೆಂಟರು ಬುಧವಾರ ನಗರದಲ್ಲಿ ಧರಣಿ ನಡೆಸಿದರು.
ತಾಲೂಕು ಕಚೇರಿ ಆವರಣದಿಂದ ಜಿಲ್ಲಾಧಿಕಾರಿ ಕಚೇರಿಗೆ ಗ್ರಾಹಕರು ಮತ್ತು ನೂರಾರು ಏಜೆಂಟರು, ಮುತ್ತಿಗೆ ಹಾಕಿ ರಾಜ್ಯದ ಜನತೆಯನ್ನು ವಂಚಿಸಿರುವ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಅಗ್ರಿ ಗೋಲ್ಡ್ ಹೂಡಿಕೆದಾರರ ವೇದಿಕೆಯ ರಾಜ್ಯಾಧ್ಯಕ್ಷ ಎ.ಎಸ್. ಕುಮಾರಸ್ವಾಮಿ, ಕಂಪೆನಿ ರಾಜ್ಯದ ಎಂಟು ಲಕ್ಷ ಗ್ರಾಹಕರಿಂದ 1, 700 ಕೋಟಿ ರೂ. ಗೂ ಅಧಿಕ ಮೊತ್ತದ ಹಣವನ್ನು ಹೂಡಿಕೆ ಮಾಡಿಕೊಂಡು ವಂಚಿಸಿದೆ. ಜಿಲ್ಲೆಯ ಗ್ರಾಹಕರ 16 ಕೋಟಿ ರೂ. ಯಷ್ಟು ಹಣವನ್ನು ಲಪಟಾಯಿಸಿದೆ ಎಂದು ಆರೋಪಿಸಿದರು.
ಕಂಪೆನಿಯ ಏಜಂಟರು ಹೊಟ್ಟೆಪಾಡಿಗಾಗಿ ಕೇವಲ ಉದ್ಯೋಗಿಗಳಾಗಿ ಮಾತ್ರ ಕಾರ್ಯನಿರ್ವಹಿಸಿದ್ದಾರೆ. ಗ್ರಾಹಕರಿಂದ ಹಣವನ್ನು ನೇರವಾಗಿ ಕಂಪೆನಿಗೆ ಹೂಡಿಕೆ ಮಾಡಿಸಿದ್ದಾರೆಯೇ ಹೊರತು ಆ ಹಣವನ್ನು ಏಜೆಂಟರು ಬಳಸಿಕೊಂಡಿಲ್ಲ. ಇದನ್ನರಿಯದ ಗ್ರಾಹಕರು ತಮ್ಮ ಹಣಕ್ಕಾಗಿ ಏಜೆಂಟರನ್ನು ಪೀಡಿಸುತ್ತಿದ್ದು, ಅವರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ದೂರಿದರು.
ವಂಚನೆ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಆಂಧ್ರ ಸರಕಾರ ಮಧ್ಯೆ ಪ್ರವೇಶಿಸಿ ಗ್ರಾಹಕರಿಗೆ ಹಣ ಹಿಂತಿರುಗಿಸಲು ಮುಂದಾಗಿದೆ. ಅದೇ ರೀತಿ ರಾಜ್ಯ ಸರಕಾರ ಅಗ್ರಿ ಗೋಲ್ಡ್ ಕಂಪೆನಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಗ್ರಾಹಕರಿಗೆ ಹೂಡಿಕೆ ಹಣವನ್ನು ಹಿಂತಿರುಗಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಉಪವಿಭಾಗಾಧಿಕಾರಿ ಸ್ನೇಹಲ್ ಮನವಿ ಸ್ವೀಕರಿಸಿ ಮಾತನಾಡಿ, ವಂಚನೆ ಪ್ರಕರಣ ನ್ಯಾಯಾಲ ಯದಲ್ಲಿರುವುದರಿಂದ ಹೂಡಿಕೆ ಹಣ ದೊರೆಯುವುದು ತಡವಾದರೂ ಸಿಗುತ್ತದೆ. ಅಲ್ಲಿಯವರೆಗೆ ಗ್ರಾಹಕರು ಮತ್ತು ಏಜೆಂಟರು ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡಿದರು. ತೇಗೂರು ಜಗದೀಶ್, ಜಿಲ್ಲಾಧ್ಯಕ್ಷೆ ಮಂಜುಳಾ ಶಂಕರ್, ದೇವರಾಜ್, ನಟರಾಜ್ ನಾಯ್ಕ, ಪಾರ್ವತಿ, ಹಮೀದಾ ಬಾನು, ಪಂಚಾಕ್ಷರಿ, ನಾಗಲತಾ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.







