ಪ್ರವಾಸೋದ್ಯಮ ಅಭಿವೃದ್ಧಿಗೆ ನೂತನ ಡಿಸಿ ಸಹಕಾರಿ
ಚಿಕ್ಕಮಗಳೂರು, ಜು.13: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ಧಿಗೆ ಜಿಲ್ಲಾಧಿಕಾರಿ ಜಿ.ಸತ್ಯವತಿ ನೂತನವಾಗಿ ಅಧಿಕಾರ ವಹಿಸಿಕೊಂಡಿರುವುದು ಸಹಕಾರಿಯಾಗಲಿದೆ ಎಂದು ಜಿಲ್ಲಾ ಹೋಂ ಸ್ಟೇ ಮಾಲಕರ ಸಂಘದ ಅಧ್ಯಕ್ಷ ಸಂಪತ್ ಬ್ಯಾರವಳ್ಳಿ ತಿಳಿಸಿದ್ದಾರೆ.
ಅವರು ಇಂದು ಹೋಂ ಸ್ಟೇ ಮಾಲಕರ ಸಂಘದಿಂದ ನೂತನ ಜಿಲ್ಲಾಧಿಕಾರಿಗಳಿಗೆ ಹೂ ಗುಚ್ಛ ನೀಡಿ ಸ್ವಾಗತಿಸಿ ನಂತರ ಮಾತನಾಡಿ, ಈ ಜಿಲ್ಲೆ ಪ್ರಕೃತಿದತ್ತವಾಗಿ ರಾಜ್ಯದಲ್ಲಿಯೇ ಅತ್ಯಂತ ಗಮನ ಸೆಳೆದಿದೆ. ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಕಲ್ಲತ್ತಗಿರಿ ಸೇರಿದಂತೆ ರಾಷ್ಟ್ರದ ಗಮನ ಸೆಳೆದಿರುವ ಪುಣ್ಯಕ್ಷೇತ್ರಗಳನ್ನು ಒಳಗೊಂಡಿದೆ.
ಜಿಲ್ಲಾಧಿಕಾರಿ ಈ ಹಿಂದೆ ಪ್ರವಾಸೋದ್ಯಮ ಇಲಾಖೆಯ ನಿರ್ದೆೇಶಕರಾಗಿ ಕರ್ತವ್ಯ ನಿರ್ವಹಿಸಿರುವುದರಿಂದ ರಾಜ್ಯದಲ್ಲಿನ ಪ್ರವಾಸಿ ಸ್ಥಳಗಳ ಬಗ್ಗೆ ಸಂಪೂರ್ಣ ಮಾಹಿತಿ ಇದ್ದು ಹೋಂ ಸ್ಟೇ, ರೆಸಾರ್ಟ್, ಹೊಟೇಲ್ ಉದ್ಯಮಗಳು ಅದರ ಆಗು ಹೋಗುಗಳ ಬಗ್ಗೆಯೂ ತಿಳಿದಿರುವುದರಿಂದ ಜಿಲ್ಲೆಯ ಪ್ರವಾಸೋದ್ಯಮ ಅಭಿವದ್ಧಿಗೆ ಹೆಚ್ಚು ಸಹಕಾರಿಯಾಗಲಿವೆ ಎಂದು ತಿಳಿಸಿದರು. ನಿರ್ದೇಶಕ ಹೊಲದಗದ್ದೆ ಗಿರೀಶ್ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಕಾಫಿ ಬೆಳೆಗಾರರಿಗೆ ಹೋಂ ಸ್ಟೇಗಳು ಪರ್ಯಾಯ ಉದ್ಯಮವಾಗಿ ಹೊರ ಹೊಮ್ಮಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೂ ಹೆಚ್ಚು ಸಹಕಾರಿಯಾಗಿದೆ. ಮಲೆನಾಡಿನ ಪ್ರಕೃತಿದತ್ತವಾದ ಪ್ರವಾಸೋದ್ಯಮ ಕೇಂದ್ರಗಳು ರಾಜ್ಯ ಹಾಗೂ ದೇಶ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಅನುಕೂಲವಾಗಲು ಕಾನೂನು ಬದ್ಧವಾದ ಎಲ್ಲಾ ರೀತಿಯ ಸಹಕಾರವನ್ನು ಹೋಂ ಸ್ಟೇ ಮಾಲಕರ ಸಂಘ ನೀಡಲಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಅನ್ಸರ್,ನಿರ್ದೇಶಕರಾದ ಪಲ್ಲವಿ, ಅರುಣೇಶ್, ರಶ್ಮಿಸುರೇಶ್,ಶ್ವೇತಾ ಕಾನೂನು ಸಲಹೆಗಾರ ತೇಜಸ್ವಿ ಇತರರು ಉಪಸ್ಥಿತರಿದ್ದರು.







