ಇಣಚಗಲ್: ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆ ಕಾರ್ಯಾರಂಭ

ಮುದ್ದೇಬಿಹಾಳ, ಜು.13: ವಿಶ್ರಾಂತ ನ್ಯಾಯಾಧೀಶ ಜಿ.ಡಿ.ಇನಾಮದಾರ ಅವಿರತ ಪ್ರಯತ್ನದ ಫಲವಾಗಿ ಇಣಚಗಲ್ ಗ್ರಾಮಕ್ಕೆ ಮಂಜೂರಾಗಿರುವ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ಆಂಗ್ಲಮಾಧ್ಯಮ ವಸತಿ ಶಾಲೆಯು ಇಲ್ಲಿನ ಮಾರುತಿನಗರ ಬಡಾವಣೆಯಲ್ಲಿರುವ ಹಿಂದುಳಿದ ವರ್ಗದ ಮೆಟ್ರಿಕ್‌ಪೂರ್ವ ಬಾಲಕರ ವಸತಿ ನಿಲಯದಲ್ಲಿ ತಾತ್ಕಾಲಿಕವಾಗಿ ಕಾರ್ಯಾರಂಭ ಮಾಡಿದೆ.
ತಾಲೂಕಿಗೆ ಶಾಲೆ ಮಂಜೂರು ಮಾಡಿ ಸರಕಾರ ಆದೇಶ ಹೊರಡಿಸಿತ್ತು. ಶಾಲೆಗೆ ಸುವ್ಯವಸ್ಥಿತ ಕಟ್ಟಡಕ್ಕಾಗಿ ಇಣಚಗಲ್ ಗ್ರಾಮದಲ್ಲಿ 10 ಎಕರೆ ಜಮೀನನ್ನು ಇನಾಮದಾರ ದೊರಕಿಸಿಕೊಟ್ಟಿದ್ದಾರೆ. ಸದ್ಯ ಜಮೀನು ಮಂಜೂರು ಹಂತದಲ್ಲಿದ್ದು ಜಿಲ್ಲಾಧಿಕಾರಿ ಆದೇಶ ಬಾಕಿ ಉಳಿದುಕೊಂಡಿದೆ. ಜಿಲ್ಲಾಧಿಕಾರಿ ಜಮೀನನ್ನು ಅಲ್ಪಸಂಖ್ಯಾತರ ಇಲಾಖೆಗೆ ಹಸ್ತಾಂತರಿಸಿದ ಕೂಡಲೇ ಶಾಲಾ ಕಟ್ಟಡ ಕಾಮಗಾರಿ ಪ್ರಾರಂಭಗೊಳ್ಳಲಿದೆ.
6 ರಿಂದ 10ನೆ ತರಗತಿವರೆಗೆ ಅವಕಾಶ ಇರುವ ಶಾಲೆಗೆ ಮೊದಲ ಹಂತವಾಗಿ 6 ನೆ ತರಗತಿಗೆ ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯದ ಶೇ.75 ಮತ್ತು ಇತರೆ ಹಿಂದುಳಿದ ವರ್ಗದ ಸಮುದಾಯದ ಶೇ.25 ಬಡ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ. 50 ಸಂಖ್ಯಾಬಲದ 6 ನೆ ತರಗತಿಗೆ ಇದುವರೆಗೆ 13 ಬಾಲಕಿಯರು ಮತ್ತು 34 ಬಾಲಕರು, ಒಟ್ಟು 47 ಮಕ್ಕಳು ಪ್ರವೇಶ ಪಡೆದುಕೊಂಡಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅರ್ಹ ಮಕ್ಕಳನ್ನು ಆಯ್ಕೆ ಮಾಡಲಾಗಿದೆ.
ಹಿಂದುಳಿದ ವರ್ಗದ ಮೆಟ್ರಿಕ್‌ಪೂರ್ವ ಬಾಲಕರ ವಸತಿ ನಿಲಯದಲ್ಲಿಯೇ ಮಕ್ಕಳ ವಸತಿ ಮತ್ತು ಕಲಿಕೆಗೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಶಿಕ್ಷಕರಾಗಿ ಸೇವಾ ನಿವೃತ್ತಿಹೊಂದಿರುವ ಶಿಕ್ಷಕ ಸಿ.ಎಸ್.ಬಾಗೇವಾಡಿಯವರನ್ನು ಪ್ರಾಂಶುಪಾಲರಾಗಿ ತಾತ್ಕಾಲಿಕ ನೇಮಕ ಮಾಡಲಾಗಿದೆ. ಜಿಲ್ಲೆಯ ವಿವಿಧ ವಸತಿ ಶಾಲೆಗಳಲ್ಲಿ ಸೇವೆ ಸಲ್ಲಿಸಿರುವ 5 ಶಿಕ್ಷಕರನ್ನು ಈ ಶಾಲೆಗೆ ನಿಯೋಜಿಸಲಾಗಿದೆ. ಮೆಟ್ರಿಕ್‌ಪೂರ್ವ ಬಾಲಕರ ವಸತಿ ನಿಲಯದ ಮೇಲ್ವಿಚಾರಕರೇ ಈ ಶಾಲೆಯ ಮೇಲ್ವಿಚಾರಣೆ, ಉಸ್ತುವಾರಿ ನಿರ್ವಹಿಸುತ್ತಿದ್ದಾರೆ.
ಶಾಲೆಯ ಮಕ್ಕಳಿಗೆ ಇದುವರೆಗೂ ಸರಕಾರದಿಂದ ಸೌಲಭ್ಯ ಬಂದಿಲ್ಲ. ಹೀಗಾಗಿ ಹಿಂದುಳಿದ ವರ್ಗದ ವಸತಿ ನಿಲಯದ ಮಕ್ಕಳಿಗೆ ಇರುವ ವಸತಿ ಸೌಲಭ್ಯಗಳನ್ನೇ ಇವರಿಗೂ ಹಂಚಿಕೊಡಲಾಗಿದೆ. ಪ್ರತ್ಯೇಕ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ಶಾಲೆಯನ್ನು ಪ್ರಸಕ್ತ ಸಾಲಿನಿಂದ ಇಣಚಗಲ್‌ನಲ್ಲೇ ಪ್ರಾರಂಭಿಸುವ ಯೋಜನೆ ಇತ್ತು. ಇದಕ್ಕಾಗಿ ಇನಾಮದಾರ ಅವರು ತಮ್ಮ ಮನೆ ಮತ್ತು ಗ್ರಾಮದಲ್ಲಿನ ಕೆಲ ಕಟ್ಟಡಗಳನ್ನು ಒದಗಿಸಲು ಮುಂದೆ ಬಂದಿದ್ದರು. ಆದರೆ ಮೂಲಸೌಕರ್ಯ ಕೊರತೆ ಹಿನ್ನೆಲೆಯಲ್ಲಿ ಶಾಲೆಯನ್ನು ಇಲ್ಲಿಯೇ ತಾತ್ಕಾಲಿಕವಾಗಿ ಪ್ರಾರಂಭಿಸಲಾಗಿದ್ದು ಮುಂದಿನ ದಿನಗಳಲ್ಲಿ ಶಾಲೆಯನ್ನು ಇಣಚಗಲ್‌ಗೆ ವರ್ಗಾವಣೆ ಮಾಡುವ ಇರಾದೆ ಅಧಿಕಾರಿಗಳಲ್ಲಿದೆ.
ಇಣಚಗಲ್ ಗ್ರಾಮದ ಜಮೀನು ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅತಿ ಶೀಘ್ರ ಪ್ರಕ್ರಿಯೆ ಪೂರ್ಣಗೊಳಿಸಿ ಅಲ್ಪಸಂಖ್ಯಾತ ಇಲಾಖೆಗೆ ಹಸ್ತಾಂತರಿಸಿ ಶಾಲಾ ಕಟ್ಟಡಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಡಿ.ರಂದೀಪ್, ಜಿಲ್ಲಾಧಿಕಾರಿ, ವಿಜಯಪುರ.
ಶಾಲೆ ಮಂಜೂರಾತಿಗೆ ಸರಕಾರದ ಮಟ್ಟದಲ್ಲಿ ಶ್ರಮಿಸಿದ್ದೇನೆ. ಜಮೀನು ಕೂಡಾ ಒದಗಿಸಿಕೊಟ್ಟಿದ್ದೇನೆ. ಜಿಲ್ಲಾಧಿಕಾರಿ ಮಂಜೂರಾತಿ ಬಾಕಿ ಇದೆ. ಆದಷ್ಟು ಬೇಗ ಶಾಲಾ ಕಟ್ಟಡ ಕಾಮಗಾರಿ ಪ್ರಾರಂಭಿಸಿ ಇಣಚಗಲ್‌ನಲ್ಲೇ ಶಾಲೆ ನಡೆಸುವ ಮೂಲಕ ಗ್ರಾಮೀಣ ಭಾಗಕ್ಕೆ ಅನುಕೂಲ ಮಾಡಿಕೊಡಬೇಕಿದೆ.
ಜಿ.ಡಿ.ಇನಾಮದಾರ, ನಿವೃತ್ತ ನ್ಯಾಯಾಧೀಶ, ಇಣಚಗಲ್







