ನಾಯಿಮಾಂಸ ವ್ಯಾಪಾರದ ವಿರುದ್ಧ ಪ್ರಾಣಿಗಳ ಹಕ್ಕು ಸಂಸ್ಥೆಯ ಅಭಿಯಾನ
ಹೊಸದಿಲ್ಲಿ,ಜು.13: ಏಷ್ಯಾದ್ಯಂತ ವಾರ್ಷಿಕ ಸುಮಾರು ಮೂರು ಕೋಟಿ ನಾಯಿಗಳನ್ನು ಕೊಲ್ಲಲಾಗುತ್ತಿದೆ ಎಂದು ಪ್ರತಿಪಾದಿಸಿರುವ ಪ್ರಾಣಿ ಹಕ್ಕುಗಳ ಸಂಸ್ಥೆ ಹ್ಯೂಮೇನ್ ಸೊಸೈಟಿ ಇಂಟರ್‌ನ್ಯಾಷನಲ್-ಇಂಡಿಯಾ(ಎಚ್‌ಎಸ್‌ಐ-ಐ) ಈ ‘ಕ್ರೂರ ಮತ್ತು ಕಾನೂನು ಬಾಹಿರ ’ ವ್ಯಾಪಾರವನ್ನು ಕೊನೆಗೊಳಿಸಲು ಅಭಿಯಾನವೊಂದನ್ನು ಬುಧವಾರ ಆರಂಭಿಸಿತು.
ನಾಗಾಲ್ಯಾಂಡ್‌ನಲ್ಲಿ ಮಾಂಸಕ್ಕಾಗಿ ನಾಯಿಗಳನ್ನು ಕ್ರೂರವಾಗಿ ಕೊಲ್ಲುವುದನ್ನು ತೋರಿಸುವ ವೀಡಿಯೊವೊಂದನ್ನು ಬಿಡುಗಡೆಗೊಳಿಸಿದ ಎಚ್‌ಎಸ್‌ಐ-ಐ, ನಾಯಿಮಾಂಸ ಸೇವನೆಯನ್ನು ನಿಷೇಧಿಸಲು ಈಗಿರುವ ಕಾನೂನನ್ನು ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ನಾಗಾಲ್ಯಾಂಡ್ ಮುಖ್ಯಮಂತ್ರಿ ಟಿ.ಆರ್.ಝೆಲಿಯಾಂಗ್ ಅವರಿಗೆ ಪತ್ರವನ್ನೂ ಬರೆದಿದೆ.
ಮಾನವರ ಸೇವನೆಗಾಗಿ ನಾಯಿಮಾಂಸ ಮಾರಾಟ ಅಕ್ರಮವಾಗಿದ್ದರೂ ನಾಗಾಲ್ಯಾಂಡ್ ಮತ್ತು ಈಶಾನ್ಯ ಭಾರತದ ಇತರ ಕೆಲವು ರಾಜ್ಯಗಳಲ್ಲಿ ಈ ಪರಿಪಾಠವಿನ್ನೂ ಇದೆ ಎಂದು ಅದು ಹೇಳಿದೆ.
ಪ್ರತಿ ವರ್ಷ 30,000ಕ್ಕೂ ಅಧಿಕ ಬಿಡಾಡಿ ಮತ್ತು ಕದ್ದ ಸಾಕುನಾಯಿಗಳನ್ನು ಕಳ್ಳಸಾಗಣೆ ಮೂಲಕ ಜೀವಂತ ಪ್ರಾಣಿಗಳ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಕಟ್ಟಿಗೆಯ ದೊಣ್ಣೆಗಳಿಂದ ಬಡಿದು ಸಾಯಿಸಲಾಗುತ್ತದೆ ಎಂದೂ ಎಚ್‌ಎಸ್‌ಐ-ಐ ತಿಳಿಸಿದೆ.