ಹಾಕಿ ಒಲಿಂಪಿಯನ್ ಜೋ ಆ್ಯಂಟಿಕ್ ನಿಧನ

ಮುಂಬೈ, ಜು.13: ಹಾಕಿ ಒಲಿಂಪಿಯನ್ ಜೋ ಆ್ಯಂಟಿಕ್(90 ವರ್ಷ) ದೀರ್ಘಕಾಲದ ಅನಾರೋಗ್ಯದ ಬಳಿಕ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
1960ರಲ್ಲಿ ರೋಮ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಬೆಳ್ಳಿ ಪದಕ ಗೆದ್ದಾಗ ತಂಡದ ಸದಸ್ಯರಾಗಿದ್ದ ಆ್ಯಂಟಿಕ್ ಮಗ ವಿಲಿಯಮ್ ಹಾಗೂ ಮಗಳು ರೀಟಾರನ್ನು ಅಗಲಿದ್ದಾರೆ. 2011ರಲ್ಲಿ ಆ್ಯಂಟಿಕ್ ಅವರ ಪತ್ನಿ ತೀರಿಕೊಂಡಿದ್ದರು.
ತಂದೆಗೆ ಸೌಖ್ಯವಿರಲಿಲ್ಲ. ಐಸಿಯುನಲ್ಲೇ ಇದ್ದರು. ಆದರೆ, ದೇಶಕ್ಕೆ ಗೌರವ ತಂದಿರುವ ತಂದೆಗೆ ಯಾರೂ ಕೂಡ ನಮಗೆ ಆರ್ಥಿಕ ಸಹಾಯ ಮಾಡಲಿಲ್ಲ ಎಂದು ಪುತ್ರ ವಿಲಿಯಮ್ ಹೇಳಿದ್ದಾರೆ. ಆ್ಯಂಟಿಕ್ ರೋಮ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಫೈನಲ್ ಪಂದ್ಯವನ್ನು 1-0 ಅಂತರದಿಂದ ಗೆಲ್ಲುವ ಮೂಲಕ ಭಾರತದ 32 ವರ್ಷಗಳ ಚಿನ್ನದ ಓಟಕ್ಕೆ ಬ್ರೇಕ್ ಹಾಕಿತ್ತು.
ಎರಡು ವರ್ಷಗಳ ಬಳಿಕ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲೂ ಪಾಕಿಸ್ತಾನ ವಿರುದ್ಧ ಭಾರತ ಸೋತು ರನ್ನರ್‌ಅಪ್‌ಗೆ ತೃಪ್ತಿಪಟ್ಟುಕೊಂಡಾಗ ಆ್ಯಂಟಿಕ್ ತಂಡದ ಸದಸ್ಯರಾಗಿದ್ದರು.
1950ರಲ್ಲಿ ಭಾರತ ತಂಡದೊಂದಿಗೆ ಈಸ್ಟ್ ಆಫ್ರಿಕ ಹಾಗೂ ಯುರೋಪ್‌ಗೆ ಪ್ರವಾಸ ಕೈಗೊಂಡಿದ್ದ ಆ್ಯಂಟಿಕ್ 1980ರಲ್ಲಿ ವೆಸ್ಟರ್ನ್ ರೈಲ್ವೆ ಸೇವೆಯಿಂದ ನಿವೃತ್ತಿಯಾಗಿದ್ದರು. ನಿವೃತ್ತಿಯ ನಂತರ ಕೋಚ್ ಆಗಿದ್ದರು. 1982ರ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಒಮನ್ ಹಾಕಿ ತಂಡಕ್ಕೆ ಆ್ಯಂಟಿಕ್ ಕೋಚಿಂಗ್ ನೀಡಿದ್ದರು.







