ಕ್ರೀಡಾ ಸಚಿವರಿಂದ ಹಾಕಿ ದಂತಕತೆ ಶಾಹಿದ್ ಭೇಟಿ

ಹೊಸದಿಲ್ಲಿ, ಜು.13: ಗುರ್ಗಾಂವ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಲಿವರ್ ಹಾಗೂ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಹಾಕಿ ದಂತಕತೆ ಮುಹಮ್ಮದ್ ಶಾಹಿದ್‌ರನ್ನು ಬುಧವಾರ ಭೇಟಿಯಾಗಿರುವ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್, ಶಾಹಿದ್‌ರ ಆರೋಗ್ಯ ವಿಚಾರಿಸಿದರು.
56ರ ಹರೆಯದ ಶಾಹಿದ್‌ರಿಗೆ ಜಾಂಡಿಸ್ ಹಾಗೂ ಡೆಂಗ್ಯು ಬಾಧಿಸಿದ್ದರಿಂದ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ವಾರಾಣಸಿಯಿಂದ ಮೇದಾಂತ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಮಾಜಿ ಕ್ರೀಡಾ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಶಾಹಿದ್‌ರಿಗೆ 10 ಲಕ್ಷ ರೂ. ಮಂಜೂರು ಮಾಡಿದ್ದರು. ಶಾಹಿದ್ ಅವರು ಉದ್ಯೋಗದಲ್ಲಿದ್ದ ರೈಲ್ವೇಸ್ ಎಲ್ಲ ವೈದ್ಯಕೀಯ ವೆಚ್ಚ ಭರಿಸುವ ಭರವಸೆ ನೀಡಿತ್ತು.
ಭಾರತದ ಶ್ರೇಷ್ಠ ಹಾಕಿ ಆಟಗಾರರಾಗಿದ್ದ ಶಾಹಿದ್ 1980ರಲ್ಲಿ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ವಿ.ಭಾಸ್ಕರನ್ ನೇತೃತ್ವದ ಭಾರತೀಯ ತಂಡದ ಸದಸ್ಯರಾಗಿದ್ದರು. 1982ರಲ್ಲಿ ದಿಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಹಾಗೂ 1986ರಲ್ಲಿ ಸಿಯೋಲ್ ಏಷ್ಯಾಡ್‌ನಲ್ಲಿ ಕಂಚು ಜಯಿಸಿರುವ ಭಾರತ ತಂಡದ ಭಾಗವಾಗಿದ್ದರು.





