ವಿಪಕ್ಷಗಳಿಂದ ವಿಧಾನ ಮಂಡಲದಲ್ಲಿ ಅಹೋರಾತ್ರಿ ಧರಣಿ
ವಿಧಾನ ಮಂಡಲ ಅಧಿವೇಶನ

ಬೆಂಗಳೂರು, ಜು.13: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು, ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಬೇಕು, ಎಫ್‌ಐಆರ್ ದಾಖಲಿಸಬೇಕೆಂದು ಆಗ್ರಹಿಸಿ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ವಿಧಾನ ಮಂಡಲ ಉಭಯ ಸದನಗಳಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಂಡಿವೆ.
ಬುಧವಾರ ವಿಧಾನಸಭೆ ಹಾಗೂ ಮೇಲ್ಮನೆಗಳಲ್ಲಿ ವಿಪಕ್ಷಗಳ ಸದಸ್ಯರು ಸ್ಪೀಕರ್ ಹಾಗೂ ಸಭಾಪತಿ ಪೀಠದ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿ ಹಾಕುವ ಉದ್ದೇಶದಿಂದ ರಾಜ್ಯ ಸರಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ ಎಂದು ದೂರಿದರು.
ಹೋರಾಟ ನಿಲ್ಲದು: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ನ್ಯಾಯಾಂಗ ತನಿಖೆ ಮೂಲಕ ಪ್ರಕರಣವನ್ನು ಮುಚ್ಚಿ ಹಾಕಲು ಸರಕಾರ ಹುನ್ನಾರ ನಡೆಸುತ್ತಿದೆ. ಸಚಿವ ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಎಫ್‌ಐಆರ್ ದಾಖಲಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವ ವರೆಗೂ ಹೋರಾಟ ನಿಲ್ಲದು ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಎಚ್ಚರಿಸಿದರು.
ನ್ಯಾಯಾಂಗ ತನಿಖೆಗಳು ಹೇಗೆ ನಡೆಯುತ್ತವೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಹೀಗಾಗಿ ನ್ಯಾಯಾಂಗ ತನಿಖೆಯಿಂದ ಯಾವುದೇ ಪ್ರಯೋಜನವಿಲ್ಲ. ಆದುದರಿಂದ ಗಣಪತಿ ತಮ್ಮ ಸಂದರ್ಶನದಲ್ಲಿ ಹೆಸರಿಸಿರುವವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು.
ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಡಿವೈಎಸ್ಪಿ ಗಣಪತಿ ಮಾಧ್ಯಮಕ್ಕೆ ನೀಡಿದ ಸಂದರ್ಶನವನ್ನು ಆಧರಿಸಿ, ಎಫ್‌ಐಆರ್ ದಾಖಲಿಸಬೇಕು. ಸಚಿವ ಜಾರ್ಜ್ ರಾಜೀನಾಮೆ ನೀಡುವವರೆಗೂ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಎಫ್‌ಐಆರ್ ಇಲ್ಲದೆ ತನಿಖೆ: ಎಫ್‌ಐಆರ್ ದಾಖಲಿಸದೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ. ಸಚಿವ ಜಾರ್ಜ್ ಕೂಡಲೇ ರಾಜೀನಾಮೆ ಪಡೆಯಬೇಕು, ಜಾರ್ಜ್ ಸೇರಿ ಪೊಲೀಸ್ ಅಧಿಕಾರಿಗಳಿಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿ, ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಈಶ್ವರಪ್ಪ ಒತ್ತಾಯಿಸಿದರು.
ಸದನ ನಾಯಕರ ಸಭೆ ಕರೆದ ಸ್ಪೀಕರ್
ಬೆಂಗಳೂರು: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಆಗ್ರಹಿಸಿ ವಿರೋಧ ಪಕ್ಷಗಳ ಸದಸ್ಯರು ಅಹೋರಾತ್ರಿ ಧರಣಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸ್ಪೀಕರ್ ಕೆ.ಬಿ.ಕೋಳಿವಾಡ ಜು.14ರಂದು ಬೆಳಗ್ಗೆ 10 ಗಂಟೆಗೆ ತಮ್ಮ ಕಚೇರಿಯಲ್ಲಿ ಸದನ ನಾಯಕರ ಸಭೆಯನ್ನು ಕರೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ವಿರೋಧ ಪಕ್ಷದ ನಾಯಕ ಜಗದೀಶ್‌ಶೆಟ್ಟರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಇನ್ನಿತರ ಹಿರಿಯ ಸದಸ್ಯರಿಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸ್ಪೀಕರ್ ಆಹ್ವಾನ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮನವೊಲಿಕೆ ಯತ್ನ ವಿಫಲ: ವಿಧಾನಸಭೆಯಲ್ಲಿ ಧರಣಿ ನಿರತರಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ಮನವೊಲಿಸಲು ಸ್ಪೀಕರ್ ಕೆ.ಬಿ.ಕೋಳಿವಾಡ ನಡೆಸಿದ ಯತ್ನ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ಧರಣಿನಿರತ ಸದಸ್ಯರಿಗೆ ಅಗತ್ಯವಿರುವ ಸೌಲಭ್ಯ ಗಳನ್ನು ಕಲ್ಪಿಸುವಂತೆ ಸಿಬ್ಬಂದಿಗೆ ಸ್ಪೀಕರ್ ಸೂಚನೆ ನೀಡಿದರು.
ಡಿವೈಎಸ್ಪಿ ಕಲ್ಲಪ್ಪ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ-ಹಾಲಿ ಶಾಸಕರ ಕೈವಾಡ: ನಡಹಳ್ಳಿ
ಬೆಂಗಳೂರು: ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಪ್ರಕರಣದಲ್ಲಿ ‘ಮಾಜಿ ಸಚಿವ ಹಾಗೂ ಹಾಲಿ ಶಾಸಕರೊಬ್ಬರ ಕೈವಾಡವಿದ್ದು, ಸೂಕ್ತ ತನಿಖೆ ನಡೆಸಿದರೆ ಸತ್ಯಾಂಶ ಹೊರಬರಲಿದೆ’ ಎಂಬ ಆಡಳಿತ ಪಕ್ಷದ ಸದಸ್ಯ ಎ.ಎಸ್. ಪಾಟೀಲ್ ನಡಹಳ್ಳಿ ಹೇಳಿಕೆ ತೀವ್ರ ಆಕ್ಷೇಪ ಹಾಗೂ ಚರ್ಚೆಗೆ ಗ್ರಾಸವಾಯಿತು.
ಬುಧವಾರ ವಿಧಾನಸಭೆಯಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಸರಕಾರದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ನಡಹಳ್ಳಿ, ಕಲ್ಲಪ್ಪ ಹಂಡಿಬಾಗ್ ಅಮಾಯಕ. ಆತನ ಆತ್ಮಹತ್ಯೆಗೆ ಮಾಜಿ ಸಚಿವರೊಬ್ಬರು ಕಾರಣ ಎಂದು ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿದರು.
ಅಲ್ಲದೆ, ಅಪಹರಣ ಪ್ರಕರಣದ ಆರೋಪಿಗಳ ಬಿಡುಗಡೆಗೆ ಚಿಕ್ಕಮಗಳೂರಿನ ಮಾಜಿ ಸಚಿವರೆ ದೂರವಾಣಿ ಕರೆ ಮಾಡಿದ್ದು, ಈ ಬಗ್ಗೆ ತನಿಖೆ ನಡೆದರೆ ಸತ್ಯಾಂಶ ಬೆಳಕಿಗೆ ಬರಲಿದೆ. ಅಲ್ಲದೆ, ಈ ಸಂಬಂಧ ತನ್ನ ಬಳಿ ದಾಖಲಾತಿಯೂ ಇದೆ ಎಂದು ಕಡತವನ್ನು ಪ್ರದರ್ಶಿಸಿದರು.
ಕೂಡಲೇ ಮಧ್ಯ ಪ್ರವೇಶಿಸಿದ ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್ ಹಾಗೂ ಆಡಳಿತ ಪಕ್ಷದ ಸದಸ್ಯ ಕೆ.ಎನ್.ರಾಜಣ್ಣ, ಈ ಸದನದ ಸದಸ್ಯರೊಬ್ಬರ ಹೆಸರನ್ನು ಉಲ್ಲೇಖಿಸಿದ್ದು, ನನ್ನ ಕ್ಷೇತ್ರದ ಜನತೆ ತನ್ನನ್ನು ಅನುಮಾನದಿಂದ ನೋಡುವ ಸಾಧ್ಯತೆಗಳಿವೆ. ಹೀಗಾಗಿ ಅವರ ಹೆಸರನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು.
ಬಳಿಕ ಮಾತನಾಡಿದ ನಡಹಳ್ಳಿ, ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಾಜಿ ಸಚಿವರು ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡು ಅಪಹರಣ ಪ್ರಕರಣದ ಆರೋಪಿಗಳನ್ನು ಬಿಡುವಂತೆ ನಿರ್ದೇಶನ ನೀಡಿದ್ದಾರೆಂಬ ಮಾಹಿತಿಯಿದೆ. ಹೀಗಾಗಿ ಪ್ರಕರಣದ ಸಮಗ್ರ ತನಿಖೆ ಆಗಬೇಕೆಂದು ಒತ್ತಾಯಿಸಿದರು.
ಇದರಿಂದ ಒಮ್ಮೆಗೆ ಆಕ್ರೋಶಿತರಾದ ವಿಪಕ್ಷ ಸದಸ್ಯರಾದ ಸಿ.ಟಿ.ರವಿ, ಲಕ್ಷ್ಮಣ ಸವದಿ, ಜೀವರಾಜ್, ಅಪ್ಪಚ್ಚು ರಂಜನ್, ಸುನಿಲ್ ಕುಮಾರ್ ಸೇರಿದಂತೆ ಹಲವು ಸದಸ್ಯರು, ‘ಈ ಸದನದ ಸದಸ್ಯರ ಬಗ್ಗೆ ಸುಳ್ಳು ಆರೋಪ ಸರಿಯಲ್ಲ. ಅವರ ಬಳಿ ದಾಖಲೆಗಳಿವೆ ಎಂದು ಹೇಳಿದ್ದು, ಕೂಡಲೇ ಬಹಿರಂಗಪಡಿಸಬೇಕು’ ಎಂದು ಕೋರಿದರು.
ಸಂಶಯದ ಬೀಜ ಬಿತ್ತುವುದು ಸರಿಯಲ್ಲ. ದಾಖಲೆಯನ್ನು ಬಹಿರಂಗಪಡಿಸಿ, ಆಪಾದನೆಗೊಳಗಾದ ವ್ಯಕ್ತಿಗೆ ಸಮರ್ಥನೆ ಮಾಡುವ ಅಥವಾ ನಿರಾಕರಿಸುವ ಅವಕಾಶ ಕಲ್ಪಿಸಬೇಕು. ಈ ಮನೆಯ ಸದಸ್ಯರ ವಿರುದ್ಧ ಆಧಾರ ರಹಿತ ಆರೋಪ ಅಕ್ಷಮ್ಯ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ಈ ಗದ್ದಲದ ಮಧ್ಯೆಯೇ ಎದ್ದುನಿಂತ ಎ.ಎಸ್. ಪಾಟೀಲ ನಡಹಳ್ಳಿ, ಅಪಹರಣ ಪ್ರಕರಣದ ಮೂಲ ಸೂತ್ರದಾರ ಬಜರಂಗ ದಳದ ಮುಖಂಡ ಖಾಂಡ್ಯ ಪ್ರವೀಣ್, ಪವನ್ ಕುಮಾರ್ ಸೇರಿದಂತೆ ಎಲ್ಲ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದರೆ ಮಾಜಿ ಸಚಿವರ ಪಾತ್ರ ಗೊತ್ತಾಗಲಿದೆ ಎಂದರು. ಇದರಿಂದ ಮತ್ತಷ್ಟು ಕೆರಳಿದ ಬಿಜೆಪಿ ಸದಸ್ಯರು, ಆಡಳಿತ ಪಕ್ಷದ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಡಹಳ್ಳಿ ಅವರು ಹೀರೋ ಆಗಲಿಕ್ಕೆ ಯಾವುದೇ ದಾಖಲೆಗಳಿಲ್ಲದೆ ಆರೋಪ ಮಾಡಿದ್ದು, ಅವರು ಸೂಕ್ತ ದಾಖಲೆಗಳನ್ನು ನೀಡಬೇಕು. ಇಲ್ಲವಾದರೆ ಅವರು ತೆಪ್ಪಗೆ ಕೂರಬೇಕು. ಅಲ್ಲದೆ, ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಕೂಡಲೇ ಮಧ್ಯ ಪ್ರವೇಶಿಸಿ ಸ್ಪೀಕರ್ ಕೆ.ಬಿ.ಕೋಳಿವಾಡ, ಆರೋಪ ಸಂಬಂಧ ಅಗತ್ಯ ದಾಖಲೆಗಳಿದ್ದರೆ ನೀಡಿ ಎಂದು ನಡಹಳ್ಳಿಗೆ ಸೂಚಿಸಿದರು. ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ‘ಮಾಜಿ ಸಚಿವ ಹಾಗೂ ಹಾಲಿ ಶಾಸಕರ ಕೈವಾಡ’ ಎಂಬ ಪದವನ್ನು ಕಡತದಿಂದ ತೆಗೆದು ಹಾಕುವಂತೆ ರೂಲಿಂಗ್ ನೀಡಿದರು.
ನಿಷ್ಪಕ್ಷಪಾತ ತನಿಖೆಗೆ ರಿಝ್ವಾನ್ ಆಗ್ರಹ
ಬೆಂಗಳೂರು, ಜು.13: ಚಿಕ್ಕಮಗಳೂರಿನ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆಯಲ್ಲಿ ಮಾಜಿ ಸಚಿವರೊಬ್ಬರ ಕೈವಾಡ ವಿದೆ ಎನ್ನಲಾಗಿದೆ. ಹೀಗಾಗಿ ತನಿಖೆಯನ್ನು ನಿಷ್ಪಕ್ಷಪಾತ ವಾಗಿ ನಡೆಸಿದರೆ ಮಾತ್ರವೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಬಹುದೆಂದು ಕಾಂಗ್ರೆಸ್ ಸದಸ್ಯ ರಿಝ್ವೆನ್ ಅರ್ಷದ್ ತಿಳಿಸಿದ್ದಾರೆ.
ಬುಧವಾರ ವಿಧಾನಪರಿಷತ್‌ನಲ್ಲಿ ನಿಯಮ 68ರಡಿ ಮಾತನಾಡಿದ ಅವರು, ಡಿವೈಎಸ್ಪಿ ಕಲ್ಲಪ್ಪ ಪ್ರಾಮಾಣಿಕ, ನಿಸ್ವಾರ್ಥ ಅಧಿಕಾರಿಯಾಗಿದ್ದರು. ಉದ್ದೇಶಪೂರ್ವಕವಾಗಿ ಕಲ್ಲಪ್ಪರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಸಿ ಅಪಹರಣ ಪ್ರಕರಣದ ನಾಟಕ ಆಡಲಾಗಿದೆ. ತನಿಖೆಯಿಂದ ಇವೆಲ್ಲವೂ ಬಹಿರಂಗವಾಗಬೇಕು ಎಂದು ತಿಳಿಸಿದರು.
ಸದಸ್ಯರ ಮಾತಿಗೆ ವಿಪಕ್ಷಗಳು ಅಡ್ಡಿ: ಪರಮೇಶ್ವರ್ ಆರೋಪ
ಬೆಂಗಳೂರು, ಜು.13: ಸದನದಲ್ಲಿ ಆಡಳಿತ ಪಕ್ಷದ ಸದಸ್ಯರು ಮಾತನಾಡುವುದಕ್ಕೆ ವಿರೋಧ ಪಕ್ಷಗಳು ಅಡ್ಡಿ ಪಡಿಸುತ್ತಿದ್ದಾರೆ. ಇದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಲಂಕಷವಾಗಿ ಚರ್ಚೆ ನಡೆಸಲು ಸಾಧ್ಯವಿದೆಯೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದರು.
ಬುಧವಾರ ವಿಧಾನಪರಿಷತ್‌ನಲ್ಲಿ ಮಾತನಾಡಿದ ಅವರು, ಯಾವುದೇ ವಿಷಯವನ್ನು ಕೂಲಂಕಷವಾಗಿ ಚರ್ಚಿಸಿದರೆ ಮಾತ್ರವೆ ಸತ್ಯಾಂಶ ಹೊರಕ್ಕೆ ಬರುವುದು. ಆದರೆ, ವಿಪಕ್ಷಗಳು ಸುಗಮ ಚರ್ಚೆಗೆ ಅವಕಾಶವನ್ನೇ ಮಾಡಿಕೊಡುತ್ತಿಲ್ಲ ಎಂದು ಆರೋಪಿಸಿದರು.
ಸದನದಲ್ಲಿ ವಿಪಕ್ಷಗಳು ಚರ್ಚೆಗೆ ಪದೇ ಪದೇ ಅಡ್ಡಿ ಪಡಿಸುತ್ತಿದ್ದಾರೆ. ಇದರಿಂದ ಆಡಳಿತ ಪಕ್ಷದ ಸದಸ್ಯರು ತಮ್ಮ ಅಭಿಪ್ರಾಯವನ್ನು ಹೇಳಲು ಸಾಧ್ಯವಾಗುತ್ತಿಲ್ಲ. ವಿಪಕ್ಷ ಸದಸ್ಯರ ಮಾತನ್ನು ಆಡಳಿತ ಪಕ್ಷದ ಎಲ್ಲ ಸದಸ್ಯರು ತಾಳ್ಮೆಯಿಂದ ಆಲಿಸಿದ್ದಾರೆ. ಅದೇ ಮಾದರಿಯಲ್ಲಿ ವಿಪಕ್ಷಗಳು ತಾಳ್ಮೆಯಿಂದ ಕೇಳಬೇಕು. ಈ ಬಗ್ಗೆ ಸಭಾಪತಿಗಳು ವಿಪಕ್ಷಗಳಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದರು.
ಸರಕಾರದಲ್ಲಿ ಯಾವ ಇಲಾಖೆ ಕೆಟ್ಟದ್ದು: ವಿಪಕ್ಷ ಸದಸ್ಯರಿಗೆ ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು: ‘ಅಶೋಕ್ ನೀನು ಗೃಹ ಹಾಗೂ ಸಾರಿಗೆ ಸಚಿವನಾಗಿ ಕೆಲಸ ಮಾಡಿದ್ದೀಯಾ, ಈ ಎರಡು ಇಲಾಖೆಗಳಲ್ಲಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದೆಂದು ಹೇಳಪ್ಪ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಕುರಿತು ಉತ್ತರ ನೀಡುತ್ತಿದ್ದ ಅವರು, ಸರಕಾರದ ಆಡಳಿತ ವ್ಯವಸ್ಥೆಯಲ್ಲಿ ‘ಎಕ್ಸಿಕ್ಯೂಟಿವ್-ನಾನ್ ಎಕ್ಸಿಕ್ಯೂಟಿವ್’ ಹುದ್ದೆಗಳಿ ರುತ್ತವೆಯೇ ಹೊರತು, ಒಳ್ಳೆಯದು-ಕೆಟ್ಟದು ಎಂಬುದು ನಮಗೆ ಗೊತ್ತಿಲ್ಲ ಎಂದರು.
ಅಶೋಕ್ ನೀನು ಮುಖ್ಯಮಂತ್ರಿಯಾಗುವುದಾದರೆ ನಾನು ಬೆಂಬಲ ನೀಡುತ್ತೇನೆ. ಸುಮ್ಮನೆ ಮುಖ್ಯಮಂತ್ರಿ ಯಾಗಲು ಸಾಧ್ಯವಿಲ್ಲ ನೀನು ಸ್ವಲ್ಪ ಗಲಾಟೆ ಮಾಡು, ಆ ಮೇಲೆ ಸ್ಥಾನ ಸಿಗುತ್ತದೆ. ಯಾಕಪ್ಪ ನಿನಗೆ ಮುಖ್ಯಮಂತ್ರಿ ಯಾಗುವ ಬಯಕೆಯಿಲ್ಲವೇ ಎಂದು ಮುಖ್ಯಮಂತ್ರಿ ಕಿಚಾಯಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಜೆಡಿಎಸ್ ಸದಸ್ಯ ಜಿ.ಟಿ.ದೇವೇಗೌಡ, ನಿಮ್ಮ ರಾಜಕೀಯ ಗುರು ಯಾರು ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು. ನನ್ನ ರಾಜಕೀಯ ಗುರು ಪ್ರೊ.ನಂಜುಂಡಸ್ವಾಮಿ. ಜಾರ್ಜ್ ಫೆರ್ನಾಂಡಿಸ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ರಾಜ್ಯದ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರು, ಈ ವಿಚಾರದಲ್ಲಿ ಎರಡನೆ ಮಾತಿಲ್ಲ ಎಂದರು.
ನಾನು ಹಾಗೂ ಜಿ.ಟಿ.ದೇವೇಗೌಡ ಇಬ್ಬರು ಹಲವಾರು ವರ್ಷಗಳ ಕಾಲ ಜೊತೆಯಲ್ಲಿ ಕೆಲಸ ಮಾಡಿದ್ದೇವೆ. ಅನೇಕ ವಿದ್ಯೆಗಳನ್ನು ನಾನು ಆತನಿಂದ ಕಲಿತಿದ್ದೇನೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಂತೆ ಮತ್ತೊಮ್ಮೆ ಸಭೆಯಲ್ಲಿ ಹರ್ಷದ ಹೊನಲು.
ತಿಪ್ಪರಲಾಗ ಹಾಕಿದರೂ ಬಿಜೆಪಿಯವರು ಮುಂದಿನ ಚುನಾವಣೆಯಲ್ಲಿ ಗೆದ್ದು ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. 2018ರಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಗೋಧ್ರಾ ಪ್ರಕರಣದಲ್ಲಿ ಮೋದಿ ರಾಜೀನಾಮೆ ಕೊಟ್ಟಿದ್ದರೇ: ವಿ.ಎಸ್.ಉಗ್ರಪ್ಪ ಪ್ರಶ್ನೆ
ಬೆಂಗಳೂರು: ಬಿಜೆಪಿ ಸದಸ್ಯರು ಸಚಿವ ಕೆ.ಜೆ.ಜಾರ್ಜ್‌ರ ರಾಜೀನಾಮೆ ಕೇಳುವ ಮೊದಲು ಗೋಧ್ರಾ ಹತ್ಯಾಕಾಂಡದ ಪ್ರಮುಖ ಆರೋಪಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಧ್ಯಕ್ಷ ಅಮಿತ್ ಶಾ ರಾಜೀನಾಮೆ ಕೊಟ್ಟಿದ್ದರೇ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕೆಂದು ಆಡಳಿತ ಪಕ್ಷದ ಸದಸ್ಯ ವಿ.ಎಸ್.ಉಗ್ರಪ್ಪ ವಾಗ್ದಾಳಿ ನಡೆಸಿದರು.
ವಿಧಾನಪರಿಷತ್‌ನಲ್ಲಿ ನಿಯಮ 68ರಡಿ ಮಾತನಾಡಿದ ಅವರು, ದಿಲ್ಲಿ ಕ್ರಿಕೆಟ್ ಸಂಸ್ಥೆಯ ಹಗರಣದಲ್ಲಿ ಅರುಣ್ ಜೇಟ್ಲಿ, ಐಪಿಎಲ್ ಹಗರಣದಲ್ಲಿ ಸುಷ್ಮಾ ಸ್ವರಾಜ್, ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ, ವ್ಯಾಪಂ ಪ್ರಕರಣದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆ ನೀಡಿದ್ದಾರೆಯೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನ ಅನೇಕ ನಾಯಕರು ತಮ್ಮ ವಿರುದ್ಧ ಆರೋಪ ಬಂದ ಕೂಡಲೆ ರಾಜೀನಾಮೆ ಕೊಟ್ಟಿರುವ ಸಾಕಷ್ಟು ಉದಾಹರಣೆಗಳಿವೆ. ಈ ಹಿಂದೆ ಆರ್.ಎಲ್.ಜಾಲಪ್ಪ ವಕೀಲ ರಹೀದ್ ಹತ್ಯೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದಿದ್ದಕ್ಕೆ ರಾಜೀನಾಮೆ ಸಲ್ಲಿಸಿ ಹೊರ ನಡೆದರು. ಆ ಮೂಲಕ ತಮ್ಮ ರಾಜಕೀಯ ಜೀವನಕ್ಕೆ ದೊಡ್ಡ ಪೆಟ್ಟು ಮಾಡಿಕೊಂಡರು ಎಂದು ಅವರು ಹೇಳಿದರು.
ನೂರು ಮಂದಿ ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದೆಂದು ನಮ್ಮ ಸಂವಿಧಾನದಲ್ಲಿ ತಿಳಿಸಲಾಗಿದೆ. ಆ ಪ್ರಕಾರವಾಗಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ.ಜಾರ್ಜ್‌ರ ಯಾವುದೇ ಪಾತ್ರವಿಲ್ಲ. ಹೀಗಾಗಿ ಸಚಿವರ ರಾಜೀನಾಮೆ ಅಗತ್ಯವಿಲ್ಲ ಎಂದು ವಿ.ಎಸ್.ಉಗ್ರಪ್ಪ ಸ್ಪಷ್ಟಪಡಿಸಿದರು.
ಡಿವೈಎಸ್ಪಿ ಗಣಪತಿ ರಾಜಗೋಪಾಲ ನಗರದ ಠಾಣಾ ವ್ಯಾಪ್ತಿಯಲ್ಲಿ ಒಂದೂವರೆ ಕೋಟಿ ರೂ.ವಶಪಡಿಸಿಕೊಂಡ ಪ್ರಕರಣದಲ್ಲಿ ಸುಮಾರು 78 ಲಕ್ಷ ರೂ.ವನ್ನು ಬೇರೊಬ್ಬರ ಮನೆಯಲ್ಲಿ ಇರಿಸಿ, ಉಳಿದ ಹಣವನ್ನು ಇಲಾಖೆಗೆ ಕೊಟ್ಟಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಅವರನ್ನು ಅಮಾನತುಗೊಳಿಸಲಾಗಿತ್ತು ಎಂದು ಉಗ್ರಪ್ಪ ತಿಳಿಸಿದರು.
ಮಂಗಳೂರಿನಲ್ಲಿ ಚರ್ಚ್‌ಗಳ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ನ್ಯಾ.ಸೋಮಶೇಖರ್ ಆಯೋಗದ ವರದಿಯಲ್ಲಿ ಇವರ ಹೆಸರು ಕೇಳಿ ಬಂದಿತ್ತು. ಹೀಗಾಗಿ ಮಾನಸಿಕ ಹಿಂಸೆಗೆ ಒಳಗಾಗಿರಬಹುದು. ಚರ್ಚ್‌ದಾಳಿ ಪ್ರಕರಣದಲ್ಲಿ ಕೆಲವು ಸಂಘಟನೆಗಳು ಭಾಗಿಯಾಗಿದ್ದವು ಎಂದು ಅವರು ಆರೋಪಿಸಿದರು.
ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ತಪಾಸಣೆ ಮಾಡುವುದನ್ನು ಸರಕಾರ ಕಡ್ಡಾಯಗೊಳಿಸಬೇಕು. -ವಿ.ಎಸ್.ಉಗ್ರಪ್ಪ, ವಿಧಾನ ಪರಿಷತ್ ಸದಸ್ಯ.







