ಎಲ್ಲದಕ್ಕೂ ಇಲ್ಲಿಗೇ ಬರುವ ಅಗತ್ಯವಿಲ್ಲ: ಹೈಕೋರ್ಟ್ ಅಸಮಾಧಾನ
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ
ಬೆಂಗಳೂರು, ಜು.13: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರಿ ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆಯನ್ನು ಅರ್ಜಿ ಸಲ್ಲಿಕೆಯಾದ ದಿನವೇ ಕೈಗೆತ್ತಿಕೊಳ್ಳಲು ವಕೀಲ ರಂಗನಾಥ್‌ರೆಡ್ಡಿ ಮೆಮೋ ಸಲ್ಲಿಸುತ್ತಿದ್ದಂತೆಯೇ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅರ್ಜಿದಾರ ವಕೀಲ ರಂಗನಾಥ್‌ರೆಡ್ಡಿ ಅವರು ಪಿಐಎಲ್ ಅರ್ಜಿಯನ್ನು ಇಂದೆ ಕೈಗೆತ್ತಿಕೊಳ್ಳಲು ಮೆಮೋ ಸಲ್ಲಿಸುತ್ತಿದ್ದಂತೆಯೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಅವರಿದ್ದ ವಿಭಾಗೀಯ ನ್ಯಾಯಪೀಠವು ಎಲ್ಲದಕ್ಕೂ ನೇರವಾಗಿ ಹೈಕೋರ್ಟ್‌ಗೆ ಬರುವ ಅಗತ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.
ಅಲ್ಲದೆ, ಇಂತಹ ಅರ್ಜಿಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲೂ ಸಲ್ಲಿಸಲು ಅವಕಾಶವಿದ್ದು, ಅಲ್ಲಿಯೂ ಸಲ್ಲಿಸಬಹುದಲ್ಲಯೆಂದ ನ್ಯಾಯಪೀಠವು ಸಲ್ಲಿಕೆಯಾದ ದಿನವೇ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಅವಸರವೇನಿದೆ ಎಂದು ಪ್ರಶ್ನಿಸಿತು.
ಗಣಪತಿ ಸಾಯುವ ಮುನ್ನ ನೀಡಿದ್ದ, ಮರಣ ಪೂರ್ವ ಹೇಳಿಕೆಯ ವೀಡಿಯೊ ದಾಖಲೆ ಕೂಡ ಇದೆ. ಆದರೆ, ಪ್ರಕರಣ ನಡೆದು 5 ದಿನಗಳಾದರೂ ಆರೋಪಿಗಳಾದ ಸಚಿವ ಕೆ.ಜೆ.ಜಾರ್ಜ್, ಪ್ರಣಬ್ ಮೊಹಾಂತಿ, ಎ.ಎಂ.ಪ್ರಸಾದ್ ಅವರ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ವಕೀಲ ರಂಗನಾಥ್‌ರೆಡ್ಡಿ ಎಂಬುವರು ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದಾರೆ.





