ಜು.16ರಂದು ಕಾಂಗ್ರೆಸ್ ಬ್ಲಾಕ್ ಮಟ್ಟದ ಪ್ರತಿನಿಧಿಗಳ ಸಮಾವೇಶ
ಮಂಗಳೂರು, ಜು.13: ಕಾಂಗ್ರೆಸ್ ಪಕ್ಷದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬ್ಲಾಕ್ ಮಟ್ಟದ ಪ್ರತಿನಿಧಿಗಳ ಸಮಾವೇಶ ಜು.16ರಂದು ನಗರದ ಪುರಭವನದಲ್ಲಿ ನಡೆಯಲಿದೆ ಎಂದು ಶಾಸಕ ಜೆ.ಆರ್.ಲೋಬೊ ತಿಳಿಸಿದ್ದಾರೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಮಾವೇಶವನ್ನು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸುವರು ಎಂದರು.
ಗೃಹಸಚಿವ ಡಾ.ಜಿ.ಪರಮೇಶ್ವರ್, ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಶಾಂತರಾಮ ನಾಯ್ಕ, ರಾಜ್ಯಸಭಾ ಸದಸ್ಯರಾದ ಆಸ್ಕರ್ ೆರ್ನಾಂಡಿಸ್, ವೀರಪ್ಪ ಮೊಯ್ಲಿ, ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಮುಂತಾದವರು ಅತಿಥಿಗಳಾಗಿ ಪಾಲ್ಗೊಳ್ಳುವರು. ಸಮಾವೇಶದಲ್ಲಿ ಸುಮಾರು 3 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರ 125ನೆ ಹುಟ್ಟುಹಬ್ಬದ ಸಂಭ್ರಮ ‘ಅಂಬೇಡ್ಕರ್ ಜಯಂತ್ಯುತ್ಸವ’ ಕೂಡ ಆಯೋಜಿಸಲಾಗಿದೆ. ಅಲ್ಲದೆ ಬದಲಾವಣೆಯ ಹರಿಕಾರ ಬ್ಲೇಸಿಯಸ್ ಎಂ. ಡಿಸೋಜರ ‘ನೆನಪು ನಮನ’ ಕಾರ್ಯಕ್ರಮ, ರಾಜ್ಯ ಸರಕಾರದ ಮೂರು ವರ್ಷಗಳ ಸಾಧನೆಗಳ ಪಕ್ಷಿನೋಟ, ನೆಹರೂ-ಅಂಬೇಡ್ಕರ್‌ರ ಅಧ್ಯಯನ ಕಮ್ಮಟದ ಚಾಲನೆ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದವರು ವಿವರಿಸಿದರು.
ಸಮಾವೇಶಕ್ಕೆ ಮುನ್ನ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಲ್ಮಠ ಕೆನರಾ ಬ್ಯಾಂಕ್ ವೃತ್ತದಿಂದ ಬೆಂದೂರ್‌ವೆಲ್ ಕರಾವಳಿ ವೃತ್ತದವರೆಗಿನ ರಸ್ತೆಗೆ ‘ಬ್ಲೇಸಿಯಸ್ ಎಂ ಡಿಸೋಜ ರಸ್ತೆ’ ಎಂದು ನಾಮಕರಣ ಮಾಡಲಾಗುವುದು ಎಂದು ಲೋಬೊ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ಮನಪಾ ಮೇಯರ್ ಹರಿನಾಥ್, ಪ್ರಮುಖರಾದ ಶಶಿಧರ ಹೆಗ್ಡೆ, ಅಶ್ರ್ ಕೆ., ಪದ್ಮನಾಭ ನರಿಂಗಾನ, ಶಾಹುಲ್ ಹಮೀದ್, ನವೀನ್ ಡಿಸೋಜ, ಆಶಾ ಡಿಸಿಲ್ವ, ಲ್ಯಾನ್ಸ್ ಲೋಟ್ ಪಿಂಟೊ, ಸಫಿ ಅಹ್ಮದ್, ಉಮೇಶ್ ದೇವಾಡಿಗ, ವಿಶ್ವಾಸ್ ಕುಮಾರ್ ದಾಸ್, ಬಾಲಕೃಷ್ಣ ಶೆಟ್ಟಿ, ಟಿ.ಕೆ.ಸುಧೀರ್, ಜೆಸಿಂತಾ ಆಲ್ಫ್ರೆಡ್, ಸದಾಶಿವ ಅಮೀನ್, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.







