ಬೀಜಾಡಿ ಗ್ರಾಪಂ ಅಧ್ಯಕ್ಷರಾಗಿ ಸಾಕು ಆಯ್ಕೆ

ಕುಂದಾಪುರ, ಜು.13: ಬೀಜಾಡಿ ಗ್ರಾಪಂನ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸಾಕು ಅವರು ಆಯ್ಕೆಯಾಗಿದ್ದಾರೆ.
ಬೀಜಾಡಿ ಗ್ರಾಪಂನ ಅಧ್ಯಕ್ಷ ಸ್ಥಾನ ಈ ಹಿಂದೆ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಆ ಮೀಸಲಾತಿಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಲು ಆರಿಸಿ ಬಂದವರೇ ಇಲ್ಲದಿದ್ದುದರಿಂದ ಅಧ್ಯಕ್ಷ ಸ್ಥಾನ ಖಾಲಿ ಉಳಿದಿತ್ತು. ಉಪಾಧ್ಯಕ್ಷರಾಗಿ ಅಂದು ಆಯ್ಕೆ ಯಾಗಿದ್ದ ಜಯಂತಿ ಗಾಣಿಗ ಅವರೇ ಪ್ರಭಾರ ಅಧ್ಯಕ್ಷರಾಗಿ ಈವರೆಗೆ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದ್ದರು.
ಗ್ರಾಪಂನ ಸದಸ್ಯರಾಗಿ ಪರಿಶಿಷ್ಟ ಪಂಗಡದ ಯಾರೂ ಇಲ್ಲದಿದ್ದರೂ, ಆ ಮೀಸಲಾತಿಯ ಸದಸ್ಯ ಸ್ಥಾನಕ್ಕೆ ಪರಿಶಿಷ್ಟ ಜಾತಿಯವರು ಸದಸ್ಯರಾಗಿ ಆಯ್ಕೆಯಾಗಲು ಅವಕಾಶವಿತ್ತು. ಆದರೆ ಅಧ್ಯಕ್ಷ ಸ್ಥಾನಕ್ಕೆ ಅದು ಅನ್ವಯವಾಗುತ್ತಿರಲಿಲ್ಲ. ಇದರಿಂದ ಉಡುಪಿ ತಾಲೂಕಿನ ಕೋಡಿ ಮತ್ತು ಕುಂದಾಪುರ ತಾಲೂಕಿನ ಬೀಜಾಡಿ ಸೇರಿ ಜಿಲ್ಲೆಯ ಒಟ್ಟು ಎರಡು ಗ್ರಾಪಂಗಳಿಗೆ ಅಧ್ಯಕ್ಷರು ಆಯ್ಕೆಯಾಗದೆ ಗೊಂದಲಗಳು ಉಂಟಾಗಿತ್ತು.
ಈ ವಿಚಾರವನ್ನು ಇತ್ತೀಚೆಗೆ ಪಂಚಾಯತ್‌ರಾಜ್ ಕಾಯ್ದೆ ತಿದ್ದುಪಡಿಯ ಸಂದರ್ಭದಲ್ಲಿ ಗಮನಕ್ಕೆ ತರಲಾದ ಹಿನ್ನೆಲೆಯಲ್ಲಿ, ಪರಿಶಿಷ್ಟ ಪಂಗಡದ ಮೀಸಲಾತಿಗೆ ಪರಿಶಿಷ್ಟ ಜಾತಿಯವರೂ ಅಧ್ಯಕ್ಷರಾಗುವ ಅವಕಾಶ ಕಲ್ಪಿಸಿ ತಿದ್ದುಪಡಿ ಮಾಡಲಾಗಿತ್ತು. ಇದರಿಂದ ಇಂದು ಬೀಜಾಡಿ ಗ್ರಾಪಂಗೆ ಅಧ್ಯಕ್ಷರ ಆಯ್ಕೆ ನಡೆಯುವಂತಾಗಿದೆ.
ಉಡುಪಿ ಜಿಲ್ಲಾಧಿಕಾರಿ ಈ ಸಂಬಂಧ ಜು.4ರಂದು ಅಧಿಸೂಚನೆ ಹೊರಡಿಸಿದ್ದು, ಅದರಂತೆ ಇಂದು ಕುಂದಾಪುರ ತಹಶೀಲ್ದಾರ್ ಚುನಾವಣಾಧಿಕಾರಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿಕೊಟ್ಟರು. ಒಟ್ಟು 16 ಸದಸ್ಯ ಬಲದ ಬೀಜಾಡಿ ಗ್ರಾಪಂನಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯಿಂದ ಆಯ್ಕೆಯಾಗಿದ್ದ ಸಾಕು ವೈಕುಂಠ ಮತ್ತು ಸಾಕು ಬೆಳಿಗ್ಗೆ ನಾಮಪತ್ರ ಸಲ್ಲಿಸಿದ್ದರು.
ಅದರಂತೆ ಅಪರಾಹ್ನ 3 ಗಂಟೆಗೆ ಚುನಾವಣೆ ನಡೆದಿದ್ದು, ಇಬ್ಬರೂ ತಲಾ 8 ಮತಗಳನ್ನು ಗಳಿಸಿದರು. ಕೊನೆಗೆ ಚೀಟಿ ಎತ್ತುವ ಮೂಲಕ ಅಧ್ಯಕ್ಷರ ಆಯ್ಕೆ ನಡೆಯಿತು. ಸಾಕು ಅಧ್ಯಕ್ಷರಾಗಿ ಆಯ್ಕೆಯಾದರು. ಪಕ್ಷಗಳ ನೆಲೆಯಲ್ಲಿ ಗ್ರಾಪಂ ಸದಸ್ಯರ ಚುನಾವಣೆ ನಡೆಯದಿದ್ದರೂ, ಆಯ್ಕೆಯಾದ ಸದಸ್ಯರಲ್ಲಿ 7 ಮಂದಿ ಕಾಂಗ್ರೆಸ್‌ನೊಂದಿಗೆ ಹಾಗೂ 7 ಮಂದಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು. ಇಬ್ಬರು ಪಕ್ಷೇತರರು ಆಯ್ಕೆಯಾಗಿ ದ್ದರು. ಆ ಪೈಕಿ ಒಬ್ಬ ಪಕ್ಷೇತರರಾದ ಸಾಕು ವೈಕುಂಠರಿಗೆ ಬಿಜೆಪಿ ಸದಸ್ಯರು ಬೆಂಬಲಿಸಿದ್ದರಿಂದ ಅವರು ಗೆಲ್ಲುವ ನಿರೀಕ್ಷೆ ಇತ್ತು.







