ಕಾಶ್ಮೀರ ಹಿಂಸಾಚಾರ: ನೇತ್ರ ತಜ್ಞರ ತಂಡ ಕಳುಹಿಸಿಕೊಟ್ಟ ಕೇಂದ್ರ

ಹೊಸದಿಲ್ಲಿ, ಜು.14: ಕಾಶ್ಮೀರ ಹಿಂಸಾಚಾರದ ವೇಳೆ ಗಾಯಗೊಂಡಿರುವವರ ಚಿಕಿತ್ಸೆಗಾಗಿ ಕೇಂದ್ರಸರಕಾರ ಕಣ್ಣಿನ ತಜ್ಞರ ತಂಡವನ್ನು ಕಾಶ್ಮೀರಕ್ಕೆ ಕಳುಹಿಸಿಕೊಟ್ಟಿದೆ.
ಸತತ ಆರನೆ ದಿನವಾದ ಗುರುವಾರ ಕಾಶ್ಮೀರದ ಎಲ್ಲ ಪ್ರಮುಖ ನಗರಗಳಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಹಿಂಸಾಚಾರದಿಂದ ಮೃತರ ಸಂಖ್ಯೆ 36ಕ್ಕೆ ಏರಿದೆ.
ಇತ್ತೀಚೆಗೆ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯ ಬಳಿಕ ಕಾಶ್ಮೀರದ ಕಣಿವೆಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
ಸಾವಿರಾರೂ ಜನರು ಬೀದಿಗಿಳಿದು ಭದ್ರತಾಪಡೆಯೊಂದಿಗೆ ಘರ್ಷಣೆ ನಡೆಸಿದ್ದು, ಘರ್ಷಣೆ ನಿಯಂತ್ರಿಸಲು ಭದ್ರತಾಪಡೆಗಳು ಸಿಡಿಸಿದ ಗುಂಡು ಹಾಗೂ ಬುಲೆಟ್‌ಗಳಿಗೆ 1,300 ಜನರಿಗೆ ಗಾಯವಾಗಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ರಾಜ್ಯ ಸರಕಾರ ಅನುಸರಿಸಿದ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಸಣ್ಣ ಗುಂಡಿನ ದಾಳಿಯಿಂದ ಗಾಯಗೊಂಡಿರುವವರ ಚಿಕಿತ್ಸೆಗಾಗಿ ದಿಲ್ಲಿಯ ಏಮ್ಸ್ ಆಸ್ಪತ್ರೆಯ ಮೂವರು ಸದಸ್ಯರನ್ನು ಒಳಗೊಂಡ ನೇತ್ರ ತಜ್ಞರನ್ನು ಬುಧವಾರ ಕಾಶ್ಮೀರಕ್ಕೆ ಕಳುಹಿಸಿಕೊಡಲಾಗಿದೆ. ವೈದ್ಯರು ಕಳೆದ ಆರು ದಿನಗಳಲ್ಲಿ 90ಕ್ಕೂ ಅಧಿಕ ಜನರ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಭದ್ರತಾ ಪಡೆಗಳು ಸಿಡಿಸಿದ ಬುಲೆಟ್, ಗುಂಡಿನಿಂದಾಗಿ ಗಾಯಗೊಂಡಿರುವ ಸಂತ್ರಸ್ತರನ್ನು ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.





