ಅತ್ತಿಗೆಯನ್ನು ಕೊಚ್ಚಿಕೊಂದ ಮಾನಸಿಕ ಅಸ್ವಸ್ಥ: ಅವನನ್ನು ಹೊಡೆದು ಕೊಂದ ಗ್ರಾಮಸ್ಥರು!

ಲಕ್ನೊ, ಜುಲೈ 14: ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಅಡಿಗೆ ಕೋಣೆಯಲ್ಲಿ ಅಡಿಗೆ ಕೆಲಸದಲ್ಲಿ ನಿರತಳಾಗಿದ್ದ ತನ್ನ ಅತ್ತಿಗೆಗೆ ಮಚ್ಚಿನಿಂದ ಹಲ್ಲೆಯೆಸಗಿ ಕೊಂದು ಹಾಕಿದ ಹೃದಯ ವಿದ್ರಾವಕ ಘಟನೆ ನಡೆದಿದ್ದು ನಂತರ ಮಾನಸಿಕ ಅಸ್ವಸ್ಥನನ್ನು ಗಾಮಸ್ಥರು ಥಳಿಸಿ ಕೊಂದು ಹಾಕಿದ ಘಟನೆ ಉತ್ತರ ಪ್ರದೇಶದ ಲಕ್ನೊ ಜಿಲ್ಲೆಯ ಕೋಕರಿ ಎಂಬಲ್ಲಿಂದ ವರದಿಯಾಗಿದೆ.
ಚಾ ಅಂಗಡಿ ನಡೆಸುತ್ತಿದ್ದ ವಿಜೇಂದ್ರ ಎಂಬವರು ತನ್ನ ಪತ್ನಿ ಕಿರಣ್, ಐವರು ಮಕ್ಕಳು ಹಾಗೂ ಅವರ ತಮ್ಮ ಮಾನಸಿಕ ಅಸ್ವಸ್ಥ ರಾಜೇಂದ್ರ ಜೊತೆ ವಾಸವಾಗಿದ್ದರು. ಬುಧವಾರ ಅವರು ಎಂದಿನಂತೆ ಮನೆಯಿಂದ ಚಾ ಅಂಗಡಿಗೆ ಹೊರಟು ಬಂದಿದ್ದರು. ಅವರ ಪತ್ನಿ ಅಡಿಗೆ ಕೆಲಸಕ್ಕಾಗಿ ಅಡಿಗೆ ಕೋಣೆಗೆ ಹೋಗಿದ್ದರೆನ್ನಲಾಗಿದೆ. ಈ ವೇಳೆ ಮಾನಸಿಕ ಅಸ್ವಸ್ಥನಾಗಿದ್ದ ರಾಜೇಂದ್ರ ಅಡಿಗೆಕೋಣೆಯಲ್ಲಿದ್ದ ತನ್ನ ಅತ್ತಿಗೆ ಕೊರಳಿಗೆ ಮಚ್ಚಿನಿಂದ ಕಡಿದಿದ್ದಾನೆ. ಹಲವು ಬಾರಿ ಕಡಿದದ್ದರಿಂದ ಐದು ತಿಂಗಳ ಗರ್ಭಿಣಿಯೂ ಆಗಿದ್ದ ಮಹಿಳೆ ಸ್ಥಳದಲ್ಲೇ ಕುಸಿದು ಬಿದ್ದು ಮೃತರಾದರೆನ್ನಲಾಗಿದೆ. ಮಹಿಳೆಯ ಬೊಬ್ಬೆ ಕೇಳಿ ಓಡಿ ಬಂದವರ ಮೇಲೆಯೂ ರಾಜೇಂದ್ರ ಮಚ್ಚನ್ನು ಬೀಸಿ ಹೆದರಿಸಿದ್ದಾನೆ. ಪೊಲೀಸರಿಗೆ ದೂರು ನೀಡಿ ಅವರು ಬಂದಮೇಲೆ ರಾಜೇಂದ್ರನನ್ನು ಉಪಾಯವಾಗಿ ಸೆರೆ ಹಿಡಿಯಲಾಗಿತ್ತು. ಈ ಸಂದರ್ಭದಲ್ಲಿ ಒಟ್ಟಾದ ಗ್ರಾಮಸ್ಥರು ಅವನಿಗೆ ಮಾರಣಾಂತಿಕವಾಗಿ ಹೊಡೆದು ಗಾಯಗೊಳಿಸಿದ್ದರು. ನಂತರ ಗಂಭೀರ ಗಾಯಗೊಂಡಿದ್ದ ರಾಜೇಂದ್ರನನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿದರೂ ಆತ ಬದುಕುಳಿಯದೆ ಅಲ್ಲಿ ಮೃತನಾದ ಎಂದು ವರದಿ ತಿಳಿಸಿದೆ.





