ಉಪ್ಪಿನಂಗಡಿ: ಜು.15ರಂದು ನೂತನ ಬಸ್ಸು ತಂಗುದಾಣ ಲೋಕಾರ್ಪಣೆ
ಪುತ್ತೂರು, ಜು.14: ಉಪ್ಪಿನಂಗಡಿ ರೋಟರಿ ಕ್ಲಬ್ ಇದರ ಪದಗ್ರಹಣ ಸಮಾರಂಭ ಜು.15ರಂದು ಉಪ್ಪಿನಂಗಡಿ ಸಿ.ಎ.ಬ್ಯಾಂಕ್‌ನ ಸಂಗಮ ಸಭಾಭವನದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಸುಮಾರು 3ಲಕ್ಷ ರೂ. ವೆಚ್ಚದಲ್ಲಿ ಕ್ಲಬ್ ವತಿಯಿಂದ ನಿರ್ಮಿಸಲಾದ ನೂತನ ಬಸ್ಸು ತಂಗುದಾಣವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಕ್ಲಬ್‌ನ ನಿಯೋಜಿತ ಅಧ್ಯಕ್ಷ ವಿಜಯ ಕುಮಾರ್ ಕಲ್ಲಳಿಕೆ ತಿಳಿಸಿದ್ದಾರೆ.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ. ಅಶೋಕ್ ಪಡಿವಾಳ್ ಪದಗ್ರಹಣ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ರೋಟರಿ ಮೈಸೂರು ಜಿಲ್ಲಾ ಅಧ್ಯಕ್ಷ ಕೆ.ಎನ್. ಸುರೇಶ್ ಕುಮಾರ್, ಸಹಾಯಕ ಗವರ್ನರ್ ಸಂತೋಷ್ ಶೆಟ್ಟಿ ಮತ್ತು ಅಹ್ಮದ್ ಮುಸ್ತಫಾ ಭಾಗವಹಿಸಲಿದ್ದಾರೆ. ಕ್ಲಬ್‌ನ ವತಿಯಿಂದ ಮುಂದಿನ ದಿನಗಳಲ್ಲಿ ಅತ್ಯಾವಶ್ಯಕವಿದ್ದ ಕಡೆಗಳಲ್ಲಿ ಬಸ್ಸು ನಿಲ್ದಾಣ ನಿರ್ಮಾಣ, ಪರಿಸರ ಸಂಬಂಧಿ ಕಾರ್ಯಕ್ರಮ, ಆತ್ಮಹತ್ಯೆ ತಡೆಗಟ್ಟುವ ಬಗ್ಗೆ ಜನಜಾಗೃತಿ, ಅಕ್ಷರ ಶಿಕ್ಷಣ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ಮಾಜಿ ಅಧ್ಯಕ್ಷ ಜಾರ್ಜ್ ನೊರ್ಹೊನ, ನಿಯೋಜಿತ ಕಾರ್ಯದರ್ಶಿ ಗುಣಕರ ಅಂಗಡಿ ಮತ್ತು ಖಜಾಂಚಿ ಅಬ್ದುರ್ರಹ್ಮಾನ್ ಯುನಿಕ್ ಉಪಸ್ಥಿತರಿದ್ದರು.





