ದಾದ್ರಿಯಲ್ಲಿ ಹತ ಅಖ್ಲಾಕ್ ಕುಟುಂಬದ ವಿರುದ್ಧವೇ ಎಫ್ ಐ ಆರ್ !
ಕೋರ್ಟ್ ಆದೇಶ

ಹೊಸದಿಲ್ಲಿ,ಜು.14: ಗೋಮಾಂಸ ಸಂಗ್ರಹಿಸಿಟ್ಟಿದ್ದಾರೆಂಬ ವದಂತಿಗಳ ಹಿನ್ನೆಲೆಯಲ್ಲಿ ಸಂಘಪರಿವಾರದ ಬೆಂಬಲಿಗರಿಂದ ಹತ್ಯೆಗೀಡಾದ ಬರ್ಬರವಾಗಿ ಉತ್ತರಪ್ರದೇಶದ ದಾದ್ರಿ ಪಟ್ಟಣದ ನಿವಾಸಿ ಮುಹಮ್ಮದ್ ಅಖ್ಲಾಕ್‌ನ ಕುಟುಂಬದ ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸ್ಥಳೀಯ ನ್ಯಾಯಾಲಯವೊಂದು ಗುರುವಾರ ಆದೇಶಿಸಿದೆ.ಅಖ್ಲಾಕ್ ಕುಟುಂಬ ನೆಲೆಸಿರುವ ಬಿಸಾಡಾ ಗ್ರಾಮದ ನಿವಾಸಿಯೊಬ್ಬರು ಸಲ್ಲಿಸಿರುವ ಅರ್ಜಿಯ ಆಧಾರದಲ್ಲಿ ಎಫ್‌ಐಆರ್ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ. ಅಖ್ಲಾಕ್‌ನ ಕುಟುಂಬವು ದನದ ಕರುವೊಂದನ್ನು ಹತ್ಯೆಗೈದಿದೆ. ಅಖ್ಲಾಕ್‌ನ ಸಹೋದರ ಜಾನ್ ಮುಹಮ್ಮದ್,ಅದರ ಕತ್ತನ್ನು ಸೀಳಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಅಖ್ಲಾಕ್ ಕೊಲೆ ಪ್ರಕರಣದ ಆರೋಪಿಗಳು ಈ ಅರ್ಜಿಯನ್ನು ಬೆಂಬಲಿಸಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಪೂರ್ವಸಿದ್ಧತೆ ನಡೆಸುತ್ತಿರುವ ಸಮಯದಲ್ಲಿ ದಾದ್ರಿ ಪ್ರಕರಣವು ಹೊಸ ತಿರುವನ್ನು ಪಡೆದುಕೊಂಡಿದೆ.
ದಾದ್ರಿ ಹತ್ಯೆ ಘಟನೆಗೆ ಸಂಬಂಧಿಸಿ ಈ ವರ್ಷದ ಮೇ ತಿಂಗಳಲ್ಲಿ ಅಪರಾಧವಿಧಿ ವಿಜ್ಞಾನ ಪ್ರಯೋಗಾಲಯ ಸಲ್ಲಿಸಿದ ವರದಿಯೊಂದು ಅಖ್ಲಾಕ್‌ನ ನಿವಾಸದಲ್ಲಿ ಪತ್ತೆಯಾಗಿದ್ದ ಮಾಂಸವು ದನ ಅಥವಾ ಅದರ ಜಾತಿಗೆ ಸೇರಿದ ಪ್ರಾಣಿಯೊಂದರ ಮಾಂಸವಾಗಿದೆ ಎಂದು ತಿಳಿಸಿತ್ತು. ಇದಕ್ಕೂ ಮೊದಲು ಸ್ಥಳೀಯ ಪಶುವೈದ್ಯರೊಬ್ಬರು ಅದು ಕುರಿ ಅಥವಾ ಮೇಕೆಯ ಮಾಂಸವೆಂದು ತಿಳಿಸಿರುವುದಾಗಿ ಹೇಳಿದ್ದರು.
ಉತ್ತರಪ್ರದೇಶದಲ್ಲಿ ಬೀಫ್ ಸೇವನೆ ಅಪರಾಧವಲ್ಲದಿದ್ದರೂ ಗೋಹತ್ಯೆಯನ್ನು ನಿಷೇಧಿಸಲಾಗಿದೆ. ಅಖ್ಲಾಕ್‌ನ ಹತ್ಯೆಯ ಹಿಂದಿನ ಉದ್ದೇಶವನ್ನು ತಿಳಿದುಕೊಳ್ಳಲು ತಾವು ಆತನ ಮನೆಯಲ್ಲಿದ್ದ ಮಾಂಸವನ್ನು ಪರೀಕ್ಷಿಸಿದ್ದಾಗಿ ಪೊಲೀಸರು ತಿಳಿಸಿದ್ದರು. ಅಖ್ಲಾಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಬಿಜೆಪಿ ನಾಯನ ಪುತ್ರ ಸೇರಿದಂತೆ 18 ಮಂದಿಯನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.







