ಭಯೋತ್ಪಾದನೆ ಪಾಕಿಸ್ತಾನದ ರಾಷ್ಟ್ರೀಯ ನೀತಿಯಾಗಿದೆ : ವಿಶ್ವಸಂಸ್ಥೆಯಲ್ಲಿ ಭಾರತ

ಹೊಸದಿಲ್ಲಿ, ಜು.14: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾನವ ಹಕ್ಕುಗಳ ಕುರಿತಾಗಿ ಬುಧವಾರ ನಡೆದ ಚರ್ಚೆಯೊಂದರ ವೇಳೆ, ಕಾಶ್ಮೀರ ಹಾಗೂ ಬುರ್ಹಾನ್ ವಾನಿ ಹತ್ಯೆಯ ಕುರಿತು ಪಾಕಿಸ್ತಾನದ ನಿಯೋಗಿ ಮಲೀಹಾ ಲೋಧಿ ನೀಡಿದ ಹೇಳಿಕೆಗೆ ವಿಶ್ವಸಂಸ್ಥೆಯ ಭಾರತೀಯ ರಾಯಭಾರಿ ಸೈಯದ್ ಅಕ್ಬರುದ್ದೀನ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ಅವರ ಭಾಷಣ ಹಾಗೂ ಇತರ ಬೆಳವಣಿಗೆಗಳ ಮುಖ್ಯಾಂಶಗಳು ಇಲ್ಲಿವೆ
ಪಾಕಿಸ್ತಾನವು ಇತರರ ಭೂಮಿಗಾಗಿ ದುರಾಸೆಪಡುತ್ತಿರುವ ದೇಶವಾಗಿದೆ.
ಈ ತಪ್ಪು ಮಾರ್ಗದರ್ಶನದ ಕಡೆಗೆ ಸಾಗಲು ಪಾಕಿಸ್ತಾನವು ಭಯೋತ್ಪಾದನೆಯನ್ನು ರಾಷ್ಟ್ರೀಯ ನೀತಿಯನ್ನಾಗಿ ಉಪಯೋಗಿಸುತ್ತಿದೆ.
ಪಾಕಿಸ್ತಾನವು ಈ ತನ್ನ ಪ್ರಯತ್ನಕ್ಕೆ ಮಾನವ ಹಕ್ಕು ಹಾಗೂ ಸ್ವಯಂ ನಿರ್ಧಾರಕ್ಕೆ ಬೆಂಬಲವೆಂಬ ಮುಖವಾಡ ತೊಡಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಇದೇ ಸಭೆಯಲ್ಲಿ, ಮಾನವ ಹಕ್ಕು ಸಮಿತಿಯ ಸದಸ್ಯತ್ವ ಪಡೆಯಲು ಅಂತಾರಾಷ್ಟ್ರೀಯ ಸಮುದಾಯದ ಮನವೊಲಿಸಲು ವಿಫಲವಾಗಿರುವ ಚಾರಿತ್ರ ದಾಖಲೆಯ ದೇಶ ಪಾಕಿಸ್ತಾನವಾಗಿದೆ.
ಇಂತಹ ಕುತಂತ್ರಗಳನ್ನು ಅಂತಾರಾಷ್ಟ್ರೀಯ ಸಮುದಾಯ ಸುದೀರ್ಘ ಕಾಲದಿಂದ ನೋಡುತ್ತಿದೆ. ಅದರಿಂದಾಗಿಯೇ ಇಂದು ಬೆಳಗ್ಗೆ ಪಾಕಿಸ್ತಾನ ನಡೆಸಿದಂತಹ ಸಿನಿಕ ಪ್ರಯತ್ನಕ್ಕೆ ಈ ವೇದಿಕೆಯಲ್ಲಾಗಲಿ, ವಿಶ್ವಸಂಸ್ಥೆಯ ಇತರ ವೇದಿಕೆಗಳಲ್ಲಾಗಲಿ ಪ್ರತಿಕ್ರಿಯೆ ಲಭಿಸಿಲ್ಲ.
ವಿವಿಧತೆ, ಬಹುತ್ವ ಹಾಗೂ ಸಹಿಷ್ಣು ಸಮಾಜವಾಗಿ, ಕಾನೂನು, ಪ್ರಜಾಪ್ರಭುತ್ವ ಹಾಗೂ ಮಾನವ ಹಕ್ಕುಗಳಿಗೆ ಭಾರತದ ಬದ್ಧತೆಯು ಅದರ ಮೂಲ ಸಿದ್ಧಾಂತದಲ್ಲೇ ಪ್ರತಿಷ್ಠೆಯಾಗಿದೆ.
ಮಾತುಕತೆ ಹಾಗೂ ಸಹಕಾರದ ಎಲ್ಲ ಅನುಸರಣೆಗಳಲ್ಲಿ ಎಲ್ಲ ಮಾನವ ಹಕ್ಕುಗಳ ಉತ್ತೇಜನ ಹಾಗೂ ರಕ್ಷಣೆಗೆ ಭಾರತವು ಬಲವಾದ ಬದ್ಧತೆಯಿಂದುಳಿದಿದೆ.
ಪಾಕಿಸ್ತಾನಿ ರಾಯಭಾರಿಗೆ ಸಮನ್ಸ್ ಸಾಧ್ಯತೆ
ಸ್ಥಳೀಯ ಜಮ್ಮು-ಕಾಶ್ಮೀರದ ಪ್ರತಿನಿಧಿಗಳು ಹಾಗೂ ಸೇನಾ ಸಿಬ್ಬಂದಿಯ ಹತ್ಯೆಗಳು ಸಹಿತ ಹಲವು ಭಯೋತ್ಪಾದನಾ ಪ್ರಕರಣಗಳಲ್ಲಿ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಬುರ್ಹಾನ್ ವಾನಿಯ ಕೈವಾಡದ ಕುರಿತು ಸಾಕ್ಷಗಳನ್ನು ಹಸ್ತಾಂತರಿಸುವುದಕ್ಕಾಗಿ ಪಾಕಿಸ್ತಾನಿ ರಾಯಭಾರಿ ಅಬ್ದುಲ್ ಬಾಸಿತ್‌ಗೆ ಭಾರತ ಸಮನ್ಸ್ ನೀಡುವ ಸಾಧ್ಯತೆಯಿದೆ.
ಕಾಶ್ಮೀರದಲ್ಲಿ ಗುರುವಾರವೂ ಕರ್ಫ್ಯೂ ಮುಂದುವರಿದಿದ್ದು, ಸಾಮಾನ್ಯ ಜನಜೀವನ ಬಾಧಿಸಲ್ಪಟ್ಟಿದೆ. ಅಂಗಡಿ ಹಾಗೂ ವಾಣಿಜ್ಯ ಸ್ಥಳಗಳು ಮುಚ್ಚಿದ್ದು, ಯಾವುದೇ ವಾಹನ ರಸ್ತೆಗಿಳಿಯಲಿಲ್ಲ. ಭದ್ರತಾ ಪಡೆಗಳೊಂದಿಗಿನ ಘರ್ಷಣೆಯಲ್ಲಿ ನಾಗರಿಕರು ಸಾವಿಗೀಡಾದುದನ್ನು ಪ್ರತಿಭಟಿಸಲು ಪ್ರತ್ಯೇಕತಾವಾದಿ ಗುಂಪುಗಳು ಬಂದ್‌ಗೆ ಕರೆ ನೀಡಿದ್ದವು.







